ಬೆಂಗಳೂರು, ಮಾ.16- ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಸೋಂಕು ಹಬ್ಬದಂತೆ ಹಗಲಿರುಳು ಯೋಧರ ರೀತಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚುವರಿ ವೇತನ ಹಾಗೂ ಪಾಲಿಸಿ (ವಿಮೆ) ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸರ್ಕಾರಿ ವೈದ್ಯರು ಯೋಧರ ರೀತಿ ಕೊರೊನಾ ವೈರಸ್ ತಡೆಗಟ್ಟಲು ಕೆಲಸ ಮಾಡುತ್ತಿದ್ದಾರೆ.
ಇದಕ್ಕಾಗಿ ನಾನು ಅವರಿಗೆ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಸಿಬ್ಬಂದಿಗಳಿಗೆ ಆರ್ಥಿಕ ಬೆಂಬಲ ಹೆಚ್ಚಿಸುವ ನಿಟ್ಟಿನಲ್ಲಿ ವೇತನ ಹೆಚ್ಚಳ ಹಾಗೂ ವಿಮೆ ಮಾಡಲಾಗುವುದು ಎಂದು ಹೇಳಿದರು. ಕೊರೊನಾ ವೈರಸ್ ಮುಂಜಾಗ್ರತಾ ಸಂಬಂಧ ವಿಧಾನಸೌಧದಲ್ಲಿ ಸರ್ಕಾರಿ ಆಸ್ಪತ್ರೆಗಳ ನಿರ್ದೇಶಕರ ಜತೆ ಸಭೆ ನಡೆಸಿದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ತಪಾಸಣೆಗಾಗಿ ಬೆಂಗಳೂರು, ಹಾಸನ, ಕಲಬುರ್ಗಿ, ಮೈಸೂರು, ರಾಯಚೂರಿನಲ್ಲಿ ಪರೀಕ್ಷಾ ಪ್ರಯೋಗಾಲಯ (ಲ್ಯಾಬ್) ಪ್ರಾರಂಭಿಸಲಾಗುವುದು. ಯಾವುದೇ ಸಂಶಯಾಸ್ಪದ ವ್ಯಕ್ತಿ ಈ ರೋಗಕ್ಕೆ ತುತ್ತಾಗಿದ್ದರೆ ತಕ್ಷಣವೇ ಇಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದೆಂದು ಅವರು ಮನವಿ ಮಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ನಾವು ಡೆಸ್ಕ್ ಪ್ರಾರಂಭಿಸಿದ್ದೇವೆ. ಪ್ರತಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸಂಶಯಾಸ್ಪದ ವ್ಯಕ್ತಿಗಳನ್ನು ಇಡಲು 150ರಿಂದ 200 ಹಾಸಿಗೆಗಳನ್ನು ಮೀಸಲಿಡುವಂತೆ ಎಲ್ಲಾ ಆಸ್ಪತ್ರೆಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. ಪ್ರತಿ ದಿನ ಪ್ರತಿ ಜಿಲ್ಲೆಗಳಲ್ಲಿ ಆಯಾ ದಿನದ ಮಾಹಿತಿಯನ್ನು ನೀಡುವಂತೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.
ಒಂದು ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಸಿಗೆಗಳು ಕಡಿಮೆ ಇದ್ದಲ್ಲಿ ಖಾಸಗಿ ಕಟ್ಟಡಗಳನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಬಳಕೆ ಮಾಡಿಕೊಳ್ಳ ತೀರ್ಮಾನಿಸಲಾಗಿದೆ. ಅಲ್ಲದೆ, ಸರ್ಕಾರಿ ಕಟ್ಟಡಗಳನ್ನು ಇದೇ ಉದ್ದೇಶಕ್ಕೆ ಬಳಸಿಕೊಳ್ಳಲಿದ್ದೇವೆ ಎಂದು ಹೇಳಿದರು. ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ವೈರಸ್ ತಪಾಸಣೆಗಾಗಿ ಹೆಚ್ಚುವರಿ ಸಿಬ್ಬಂದಿ ನೀಡಬೇಕೆಂದು ಕೆಲವು ಆಸ್ಪತ್ರೆಗಳಿಂದ ಬೇಡಿಕೆ ಬಂದಿತ್ತು. ಹೀಗಾಗಿ ಯಾವ ಯಾವ ಕಾಲೇಜುಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಇದ್ದಾರೋ ಅವರನ್ನು ಕಡಿಮೆ ಸಿಬ್ಬಂದಿ ಇರುವ ಕಾಲೇಜಿಗೆ ನಿಯೋಜನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ವಿದೇಶದಂತೆ ನಮ್ಮಲ್ಲಿ ಕೊರೊನಾ ಮೂರು-ನಾಲ್ಕು ಹಂತಕ್ಕೆ ತಲುಪಿಲ್ಲ. ವಿದೇಶದಿಂದ ಯಾರೇ ಬಂದರೂ ವಿಮಾನ ನಿಲ್ದಾಣ ಸೇರಿದಂತೆ ಮತ್ತಿತರ ಕಡೆ ಕಟ್ಟುನಿಟ್ಟಿನ ತಪಾಸಣೆ ನಡೆಸಿಯೇ ಹೊರ ಬಿಡಲಾಗುತ್ತಿದೆ. ಹೀಗಾಗಿ ಬೇರೆ ಬೇರೆ ಕಡೆಯಿರುವಂತಹ ಪರಿಸ್ಥಿತಿ ನಮ್ಮಲ್ಲಿ ಇಲ್ಲ ಎಂದು ಮಾಹಿತಿ ನೀಡಿದರು. ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಇದರಲ್ಲಿ ಮೂರು ಪ್ರಕರಣ ನೆಗೆಟೀವ್ ಹಾಗೂ ಒಂದು ಪಾಸಿಟೀವ್ ಪತ್ತೆಯಾಗಿದೆ. 71 ಜನರನ್ನು ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ 171 ಮಂದಿ ಮೇಲೆ ನಿಗಾ ಇಡಲಾಗಿದೆ. ಕೆಮ್ಮು, ನೆಗಡಿ, ಶೀತ, ಜ್ವರ ಇದ್ದರೆ ನಿಮ್ಮ ಸಂಶಯವನ್ನು ನಿವಾರಣೆ ಮಾಡಿಕೊಳ್ಳಲು ಆಸ್ಪತ್ರೆಗೆ ತೆರಳಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ನೆಗಡಿ ಬಂದಿದೆ ಎಂದರೆ ಅದು ಕೊರೊನಾ ಬಂದಿದೆ ಎಂದು ಅನುಮಾನ ಪಟ್ಟುಕೊಳ್ಳಬೇಡಿ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸುಧಾಕರ್ ಮನವಿ ಮಾಡಿದರು.
ನಿಮಗೆ ಏನೇ ಅನುಮಾನವಿದ್ದರೂ ನಮ್ಮ ಸಹಾಯ ವಾಣಿ 104ಕ್ಕೆ ಕರೆ ಮಾಡಿ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು. ಅನಗತ್ಯವಾಗಿ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ವಿದೇಶದಿಂದ ಬಂದವರ ಮೇಲೆ ನಾವು ನಿಗಾ ವಹಿಸಿದ್ದೇವೆ. ಅವರು ಯಾರ ಜತೆ ಸಂಪರ್ಕ ಹೊಂದಿದ್ದಾರೋ ಅವರನ್ನು ಸಹ ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಈ ರೋಗ ತಡೆಗಟ್ಟಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ತಿಳಿಸಿದರು.