ಬೆಳಗಾವಿ: ಇಂದು ಜನತಾ ಕರ್ಫ್ಯೂ ಇದ್ದರೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತನಗೂ, ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಅದನ್ನು ಪ್ರಶ್ನಿಸಿದ ವರದಿಗಾರನಿಗೆ ಹೆಬ್ಬಾಳ್ಕರ್ ಕುಟುಂಬ ಧಮ್ಕಿ ಹಾಕಿದೆ.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜನತಾ ಕರ್ಫ್ಯೂ ಉಲ್ಲಂಘನೆ ಮಾಡಿ ಮನೆ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಿದ್ದಾರೆ. ಕಾರ್ಯಕರ್ತರು ಸೇರಿ ನೂರಾರು ಜನರಿಗೆ ಊಟ ಹಾಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರೂ ಅದನ್ನು ಉಲ್ಲಂಘನೆ ಮಾಡಿದ ಶಾಸಕಿಯ ಮನೆಯ ಬಳಿ ವರದಿಗಾಗಿ ತೆರಳಿದ ಅವರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಸಹಚರರು ಧಮ್ಕಿ ಹಾಕಿದ್ದಾರೆ.
ಸಮಾರಂಭದ ದೃಶ್ಯಾವಳಿ, ಫೋಟೋಗಳು ಎಲ್ಲಾದರೂ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೆ, ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಿ, ಇದನ್ನು ಸುದ್ದಿ ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ.
ಮಹಾಮಾರಿ ಕರೊನಾ ತಡೆಯಲು ಪ್ರಧಾನಿ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ಇಡೀ ದೇಶ, ಬೀದಿ ಬದಿಯ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳೆಲ್ಲ ಸ್ವಯಂ ಪ್ರೇರಿತರಾಗಿ ವ್ಯಾಪಾರ, ವಹಿವಾಟು ಬಂದ್ ಮಾಡಿದ್ದರೂ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತಾವು ನಡೆದದ್ದೇ ದಾರಿ ಎಂಬಂತೆ ವರ್ತಿಸಿದ್ದಾರೆ. ಜನತಾ ಕರ್ಫ್ಯೂ ಉಲ್ಲಂಘನೆ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಕರೆ ಮಾಡಿದರೆ, ಅವರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇನ್ನು ಸಾರ್ವಜನಿಕರೂ ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕರೊನಾ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ, ಮತ್ಯಾರಲ್ಲಾದರೂ ಸೋಂಕು ಕಂಡುಬಂದರೆ ಸಮಾರಂಭ ಆಯೋಜಕರನ್ನೇ ಹೊಣೆ ಮಾಡಲು ಒತ್ತಾಯಿಸಿದ್ದಾರೆ.