ಬೆಳ್ಳಿ ಪರದೆ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಶ್ರೀ ಭರತ ಬಾಹುಬಲಿ ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದ ನಾಯಕ ಕಂ ನಿರ್ದೇಶಕ ಮಂಜು ಮಾಂಡವ್ಯ ಬಿಡುಗಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರೊಮೋಷನ್‍ನ ಕೊನೆಯ ಹಂತವಾಗಿ ಮಾಧ್ಯಮಗಳ ಮುಂದೆ ಚಿತ್ರತಂಡ ಬಂದಿತ್ತು.
ಈ ಸಂದರ್ಭದಲ್ಲಿ ಹಿರಿಯ ನಟ ಚರಣ್ ರಾಜ್ ಅವರ ಮಗನ ಪರಿಚಯವನ್ನು ನಿರ್ದೇಶಕರು ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜು ಮಾಂಡವ್ಯ ಚಿತ್ರದ ಟ್ರೇಲರ್‍ನಲ್ಲಿ ತೇಜ್ ಅವರ ಬಗ್ಗೆ ಸ್ವಲ್ಪ ಝಲಕ್ ತೋರಿಸಿದ್ವಿ. ಆದರೆ ಈ ಹುಡುಗ ಯಾರು ಅನ್ನೋದು ಎಲ್ಲರ ಪ್ರಶ್ನೆ ಆಗಿತ್ತು. ಚಿತ್ರದಲ್ಲಿ ಪುರಾಣದ ಎಪಿಸೋಡ್ 10 ನಿಮಿಷಗಳ ಕಾಲ ಮೂಡಿಬರುತ್ತೆ. ಶ್ರವಣಬೆಳಗೊಳದಲ್ಲಿ ಕಾಣುವ ಬಾಹುಬಲಿಯ ಕಥೆ ಅದು. ಅದಕ್ಕೆ ಸರಿ ಹೊಂದುವಂತಹ ನಟ ನಮಗೆ ಬೇಕಿತ್ತು. ಮೊದಲು ಉಪೇಂದ್ರ ಒಪ್ಪಿಕೊಂಡಿದ್ರು. ಆದರೆ, ಅವರು ರಾಜಕೀಯದಲ್ಲಿ ಬ್ಯುಸಿ ಇದ್ದದ್ದರಿಂದ ಆಗಲಿಲ್ಲ. ನಂತರ ತೇಜ್ ಚರಣ್‍ರಾಜ್ ಅವರನ್ನು ನೋಡಿದಾಗ ಅವರು ಈ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎನಿಸಿತು. ಕನ್ನಡದಲ್ಲಿ ಈ ಪಾತ್ರದ ಮೂಲಕ ತೇಜ್ ಚರಣರಾಜ್ ಡೆಬ್ಯೂ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಬಾಹುಬಲಿಯ ಮೂರು ಬಗೆಯ ಯುದ್ಧ ಕೂಡ ಇರುತ್ತದೆ. ತೇಜ್ ಮಲ್ಲ ಯುದ್ಧದ ಪಟ್ಟುಗಳನ್ನು ಕಲಿತು ಮಾಡಿದ್ದಾರೆ. ಇದಲ್ಲದೆ ಜಾನ್ ಕೋಕೇನ್ ಅವರು ಭರತನ ಪಾತ್ರವನ್ನು ಮಾಡಿದ್ದಾರೆ. ಈ ಒಂದು ಎಪಿಸೋಡ್‍ಗೇನೇ ಸುಮಾರು 90 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇವೆ ಎಂದು ಹೇಳಿದರು. ನಂತರ ಇತ್ತೀಚೆಗೆ ನಡೆದ ಕಾಟ್ರಿವರ್ಸಿ ಬಗ್ಗೆ ಮಾತನಾಡುತ್ತ ಹೌದು, ಜೈನ್ಸ್ ಸಂಘದವರು ನೋಟಿಸ್ ತೆಗೆದುಕೊಂಡು ಬಂದಿದ್ದರು. ಅವರಿಗೆ ನಮ್ಮ ಸಿನಿಮಾದ ಕಥೆ ಏನು, ಹೇಗಿದೆ ಎಂದು ಹೇಳಿ ಮನವರಿಕೆ ಮಾಡಿದೆ. ಬಾಹುಬಲಿಯ ಬಗ್ಗೆ ಈ ರೀತಿಯ ದೃಶ್ಯ ಚಿತ್ರದಲ್ಲಿದೆ ಎಂಬುದನ್ನು ತೋರಿಸಿದಾಗ ಅವರೇ ಖುಷಿ ಪಟ್ಟು, ಚಿತ್ರಕ್ಕೆ ಶುಭ ಕೋರಿದರು.
ಜೈನ್ ಸಮುದಾಯಕ್ಕಾಗಲಿ, ಗೊಮ್ಮಟೇಶ್ವರನಿಗಾಗಲಿ ಕಾಮಿಡಿ ಮಾಡಿಲ್ಲ. ಗೌರವ ಹೆಚ್ಚುವಂತೆ ಸಿನಿಮಾ ಮಾಡಿದ್ದೇವೆ. ಬಾಹುಬಲಿಯ ತ್ಯಾಗ ಏನು ಎಂಬುದನ್ನು ಮೆಸೇಜ್ ರೂಪದಲ್ಲಿ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು. ನಂತರ ನಿರ್ಮಾಪಕರ ಕುರಿತು ಮಾತ ನಾಡಿ, ಹೊಸಬರನ್ನು ನಂಬಿ 7 ಕೋಟಿ ರೂ. ಬಜೆಟ್ ಹಾಕಿರುವ ನಿರ್ಮಾಪಕರಿಗೆ ನನ್ನ ಧನ್ಯವಾದಗಳು. ಅಲ್ಲದೆ ಬಹುಮಾನಗಳ ಬಗ್ಗೆ ಹಲವರಲ್ಲಿ ಅನುಮಾನವಿದೆ. ಕೋಟಿ ರೂ. ಬಹುಮಾನ ಕೊಡೋದು ನಿಜವೇ, ಅದಕ್ಕೆ ಸಾಕ್ಷಿ ಎಂಬಂತೆ ಕಾರು ಮತ್ತು ಆಭರಣಗಳನ್ನು ಖರೀದಿಸಿರುವ ದೃಶ್ಯಗಳನ್ನು ನಾವು ಚಿತ್ರಿಸಿಕೊಂಡಿದ್ದೇವೆ.
ಆ ಮೂಲಕ ಅನುಮಾನ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಮೊದಲ 14 ದಿನಗಳ ಒಳಗೆ ನಮ್ಮ ಸಿನಿಮಾ ನೋಡಿದವರಿಗೆ ಚಿತ್ರಮಂದಿರದಲ್ಲಿ ಸಿನಿಮಾ ಟಿಕೆಟ್ ಜೊತೆಗೆ ನಮ್ಮ ತಂಡದವರಿಂದ ಒಂದು ಕೂಪನ್ ಕೂಡ ನೀಡಲಾಗುವುದು. ಅದರಲ್ಲಿ ಅದೃಷ್ಟಶಾಲಿಗಳಾದ 20 ಜನರಿಗೆ ತಲಾ 5 ಲಕ್ಷ ರೂ.ಗಳ ಬಹುಮಾನ ನೀಡಲಾಗುವುದು ಎಂದು ಹೇಳಿದರು.ನಟ ಚರಣ್ ರಾಜ್ ಮಾತನಾಡಿ, ಮಂಜು ಮತ್ತು ನಾನು ಹಳೇ ಸ್ನೇಹಿತರು. ಬೇರೊಂದು ಸಿನಿಮಾದ ಡಬ್ಬಿಂಗ್ ಸಮಯದಲ್ಲಿ ಭರತ-ಬಾಹುಬಲಿ ಸಿನಿಮಾ ತಂಡದವರು ಮೀಟ್ ಆದರು.
ನನ್ನ ಮಗ ಹುಟ್ಟಿದ್ದು ಕನ್ನಡ ನಾಡಿನಲ್ಲೇ ಆದರೂ, ಬೆಳೆದಿದ್ದು ಮಾತ್ರ ತಮಿಳು ನಾಡಿನಲ್ಲಿ. ಆತ ಹೊಸಬ ಎಂದುಕೊಳ್ಳದೆ ಹೀರೋ ರೀತಿಯೇ ಟ್ರೀಟ್ ಮಾಡಿದರು. ಮಗ ಖುಷಿ ಆದ. ನನಗೆ ಸಿಕ್ಕ ಪ್ರೋತ್ಸಾಹ ನನ್ನ ಮಗನಿಗೂ ಸಿಗಲಿ ಎಂದು ಕೋರುತ್ತೇನೆ. ಚಿಕ್ಕ ಪಾತ್ರವಾದರೂ ಚೆನ್ನಾಗಿದೆ ಮಾಡು ಎಂದು ನಾನೇ ಹೇಳಿದೆ. ಅದನ್ನು ಪರಿಗಣಿಸಿ ಅಭಿನಯಿಸಿದ್ದಾನೆ. ಹೀರೋ ಆಗಲೇಬೇಕು ಎಂದುಕೊಳ್ಳಬೇಡ. ಕಲಾವಿದ ಆಗಿ ಎಲ್ಲ ಸಿನಿಮಾದಲ್ಲೂ ನಟಿಸು ಎಂದು ಸಲಹೆ ನೀಡಿದ್ದೇನೆ ಎಂದು ಹೇಳಿದರು.
ನಿರ್ಮಾಪಕ ಶಿವಪ್ರಕಾಶ್ ಮಾತನಾಡಿ, ಚರಣ್‍ರಾಜ್ ಅವರ ಮಗನನ್ನು ನಮ್ಮ ಬ್ಯಾನರ್ ಮೂಲಕ ಕನ್ನಡಕ್ಕೆ ಪರಿಚಯಿಸಲು ನಿಜಕ್ಕೂ ನಮಗೆ ಸಂತೋಷ ಆಗುತ್ತಿದೆ. ಪುಟ್ಟ ಪಾತ್ರವಾದರೂ ತೇಜ್ ಅದಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ ಎಂದರು. ನಾಯಕಿಯರಾದ ಸಾರಾ ಹರೀಶ್, ಶ್ರೇಯಾ ಶೆಟ್ಟಿ , ಸಂಗೀತ ನಿರ್ದೇಶಕ
ಮಣಿಕಾಂತ ಕದ್ರಿ ಕೂಡ ಚಿತ್ರದ ಕುರಿತಂತೆ ಮಾತನಾಡಿದರು.
ಪರ್ವೆಜ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಮುರಳಿ ನೃತ್ಯ ನಿರ್ದೇಶನವಿದೆ. ಈ ಚಿತ್ರದಲ್ಲಿ ಮಂಜು ಮಾಂಡವ್ಯ ಜತೆ ಚಿಕ್ಕಣ್ಣ, ಶ್ರೇಯಾ ಶೆಟ್ಟಿ, ಸಾರಾ ಹರೀಶ್, ಶೃತಿಪ್ರಕಾಶ್, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತರಾವ್, ಹರೀಶ್ ರಾಯ್, ಜಾನ್ ಕೊಕೇನ್, ಅಯ್ಯಪ್ಪ ಪಿ.ಶರ್ಮ ಕರಿಸುಬ್ಬು, ಪುಷ್ಪಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇನ್ನೇನಿದ್ದರೂ ಈ ಚಿತ್ರವನ್ನು ಪ್ರೇಕ್ಷಕರು ನೋಡಿ ನಿರ್ಧರಿ¸ ಬೇಕಿದೆ.