Breaking News

ಪೊಲೀಸ್​ ಮನೆಯಲ್ಲಿ ಚಿನ್ನಾಭರಣ ಕದಿಯುವ ವೇಳೆ ಖಾಕಿ ಕೈಗೆ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳರು

Spread the love

ತುಮಕೂರು: ಮನೆಯೊಂದರಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಖದೀಮರು ಹಾಡಹಗಲೇ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಶಿರಾ ನಗರದ ವಿದ್ಯಾನಗರದಲ್ಲಿ ಭಾನುವಾರ ನಡೆದಿದೆ.

ಪೊಲೀಸ್ ಸಿಬ್ಬಂದಿಯೊಬ್ಬರ ಮನೆಗೆ ನುಗ್ಗಿ ಚಿನ್ನಾಭರಣ ದೋಚುವಾಗಲೇ ಖತರ್ನಾಕ್ ಕಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಡವನಹಳ್ಳಿ ಪೊಲೀಸ್‌ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಅವರು ಕುಟುಂಬ ಸಮೇತ ಹೊರಗೆ ಹೋಗಿದ್ದರು. ಕಾರೊಂದರಲ್ಲಿ ಬಂದಿದ್ದ ನಾಲ್ವರು ಖದೀಮರು ಮನೆ ಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ್ದಾರೆ. ಕೂಡಲೇ ಅಲರ್ಟ್ ಆದ ಅವರು ಕೈಗೆ ಗ್ಲೌಸ್​ ಹಾಕಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಬಾಗಿಲ ಬೀಗ ಮುರಿದಿದ್ದಾರೆ. ಮನೆಯೊಳಗೆ ಇಬ್ಬರು ಹೋದರೆ, ಮತ್ತಿಬ್ಬರು ಕಾರಿನೊಳಗೆ ಕುಳಿತು ವಾಚ್ ಮಾಡುತ್ತಿದ್ದರು.

ಈ ವೇಳೆ ಚಾಲಾಕಿಗಳ ಚಲನವಲನ ಗಮನಿಸಿದ ಅಕ್ಕಪಕ್ಕದ ಮನೆಯವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಸ್ಥಳಕ್ಕಾಗಮಿಸಿದ್ದನ್ನು ಕಂಡು ಮನೆಯ ಹೊರಗೆ ಕಾರಿನಲ್ಲಿ ಕುಳಿತಿದ್ದ ಇಬ್ಬರು ಖದೀಮರು ಪರಾರಿ ಆಗಿದ್ದಾರೆ. ಇತ್ತ ಮನೆಯೊಳಗೆ ಇನ್ನಿಬ್ಬರು ಇರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಒಳಗೆ ನುಗ್ಗಿದ್ದಾರೆ.

ಚಿನ್ನಾಭರಣವನ್ನೆಲ್ಲ ಕದಿಯುತ್ತಿದ್ದ ಖದೀಮರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಡ್ರ್ಯಾಗರ್‌ನಿಂದ ಹಲ್ಲೆಗೆ ಯತ್ನಿಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಧರ್ಮೇಶ್ ಮತ್ತು ಖಲೀಲ್ ಮೇಲೆ ಕಳ್ಳರು ಹಲ್ಲೆಗೆ ಯತ್ನಿಸಿದ್ದಾರೆ. ಆದರೆ ಪೊಲೀಸರು ಇವರಿಬ್ಬರನ್ನು ಸೆರೆಹಿಡಿದಿದ್ದಾರೆ.

ಈ ವೇಳೆ ಖದೀಮನೊಬ್ಬ ಚಾಕುವಿನಿಂದ ತಾನೇ ಹೊಟ್ಟೆಗೆ ಚುಚ್ಚಿಕೊಂಡು ಹೈಡ್ರಾಮಾ ಮಾಡಿದ್ದಾನೆ. ಸ್ಥಳೀಯರ ಸಹಾಯದೊಂದಿಗೆ ಸೆರೆ ಸಿಕ್ಕ ಇಬ್ಬರು ಖದೀಮರನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಬಂಧಿತರನ್ನು ರಿಯಾದ್‌ ಮತ್ತು ಖಾಲಿದ್ ಎಂದು ಗುರುತಿಸಲಾಗಿದೆ. ಗಾಯಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಹಾಗೂ ಆರೋಪಿಗೆ ಶಿರಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹೊರಗೆ ಕಾರಿನಲ್ಲಿ ಕುಳಿತು ವೀಕ್ಷಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಪ್ರಕರಣ.. ಇನ್ನು ಮೊನ್ನೆ ಮೈಸೂರಿನ ನಂಜನಗೂಡಿನಲ್ಲಿ ರಾತ್ರಿ ಮನೆಗಳ್ಳತನವಾಗಿತ್ತು. ಇಲ್ಲಿನ ಬಸವನಗುಡಿಯ ಮನೆಯ ಮಾಲೀಕರು ಬೆಂಗಳೂರಿಗೆ ತೆರಳಿದ್ದರು. ಮನೆಗೆ ಬೀಗ ಹಾಕಿರುವುದನ್ನು ನೋಡಿದ ಕಳ್ಳರು ಯಾರೂ ಇಲ್ಲದ್ದನ್ನು ಗಮನಿಸಿ ರಾತ್ರಿ ಮನೆ ಬೀಗ ಒಡೆದು ಒಳನುಗ್ಗಿದ್ದರು. ಕೊಠಡಿಯೊಂದರಲ್ಲಿ ಇದ್ದ ಕಬ್ಬಿಣದ ಕಪಾಠಿನ ಬಾಗಿಲು ಒಡೆದು ಬೆಳ್ಳಿ ಕದ್ದಿದ್ದರು. ಈ ವೇಳೆ ಶಬ್ದ ಕೇಳಿದ ಪಕ್ಕದ ಮನೆಯವರು ಬೊಬ್ಬೆ ಹಾಕಿದ್ದು, ಈ ವೇಳೆ ಕಳ್ಳರು ಬೆಳ್ಳಿಯೊಂದಿಗೆ ಪರಾರಿಯಾಗಿದ್ದರು.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ