ಕೋಲಾರ: ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಸಿನಿಮಾದಲ್ಲಿ ಹೊಡೆಯುವ ರೀತಿಯಲ್ಲೇ ಯುವಕನ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ.ಕೋಲಾರದ ಕೆಜಿಎಫ್ ನಗರದ ಚಾಮರಾಜಪೇಟೆ ವೃತ್ತದಲ್ಲಿ ಘಟನೆ ನಡೆದಿದ್ದು, ಹುಟ್ಟುಹಬ್ಬದ ಶೋಕಿ ಹಾಗೂ ಏರಿಯಾಗಳ ನಡುವಿನ ಗ್ಯಾಂಗ್ ವಾರ್ ಟ್ರೆಂಡ್ ಕ್ರಿಯೇಟ್ ಮಾಡಿ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಯುವಕ ಸ್ಟಾಲಿನ್ ಮೃತ ಪಟ್ಟಿದ್ದಾನೆ. ಯುವಕನನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಎರಡು ದಿನದ ಹಿಂದೆ ದೊರೆ ಎಂಬುವವನ ಹುಟ್ಟುಹಬ್ಬದ ಪಾರ್ಟಿ ವಿಚಾರದಲ್ಲಿ ಎಸ್.ಟಿ ಬ್ಲಾಕ್ ಹಾಗೂ ಸುಸೈಪಾಳ್ಯಂನ ಸ್ಟಾಲಿನ್ ಮತ್ತು ಆತನ ಸ್ನೇಹಿತರ ನಡುವೆ ಏರಿಯಾ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ನಡುವೆ ನಿನ್ನೆ ರಾತ್ರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳ ಮಾಡಿಕೊಂಡಿದ್ದ ಸುಸೈ ಪಾಳ್ಯಂನ ಸ್ಟಾಲಿನ್ ಹಾಗೂ ಎಸ್.ಟಿ.ಬ್ಲಾಕ್‍ನ ಸುರೇನ್ ಕೆಜಿಎಫ್ ನಗರದ ಕೆಎಸ್‍ಆರ್ ಟಿಸಿ ಡಿಪೋ ಬಳಿ ಎದುರಾಗಿದ್ದಾರೆ. ಈ ವೇಳೆ ಲಾಂಗು ಮಚ್ಚುಗಳೊಂದಿಗೆ ಸುರೇನ್ ಹಾಗೂ ಆತನ ಬೆಂಬಲಿಗರು ಸ್ಟಾಲಿನ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಜೊತೆಗಿದ್ದ ಅರ್ನಾಡ್ ತಪ್ಪಿಸಿಕೊಂಡಿದ್ದ. ಆದರೆ ಸ್ಟಾಲಿನ್ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ, ನಂತರ ಆತನನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸ್ಟಾಲಿನ್ ಮೃತ ಪಟ್ಟಿದ್ದಾನೆ.