ಬೆಳಗಾವಿ – ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಸಾಮಾಜಿಕ ಕಳಕಳಿ ತೋರಿಸಿದ್ದಾರೆ.
ಪ್ರತಿ ನಿತ್ಯ ಶಾಸಕರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಅವರ ಗೃಹ ಕಚೇರಿಗೆ ಜನರು ಬುರುವುದು ವಾಡಿಕೆ. ದಿನವೂ ನೂರಾರು ಜನರು ಅಹವಾಲು ಸಲ್ಲಿಸಲು ಬರುತ್ತಿರುತ್ತಾರೆ. ಅವರೆಲ್ಲರ ಅಹವಾಲು ಆಲಿಸಿ, ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸವನ್ನು ಲಕ್ಷ್ಮಿ ಹೆಬ್ಬಾಳಕರ್ ಮಾಡುತ್ತ ಬಂದಿದ್ದಾರೆ.
ಆದರೆ ಕೊರೋನಾ ಬಂದಿರುವ ಈ ಸಂದರ್ಭದಲ್ಲೂ ಜನರು ತಂಡೋಪತಂಡವಾಗಿ ಬರುವುದು ನಿಂತಿಲ್ಲ. ಮನೆಯಿಂದ ಹೊರಗೆ ಬರಬೇಡಿ ಎಂದು ಅವರಲ್ಲಿ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಜನರ ಆರೋಗ್ಯಕ್ಕೆ ಸಮಸ್ಯೆಯಾಗಬಹುದು ಎನ್ನುವುದು ಒಂದು ಕಡೆಯಾದರೆ, ಅಕ್ಕಪಕ್ಕದ ಜನರೂ ಬಂದು ಈ ರೀತಿ ಜನರು ಬರುವುದರಿಂದ ತಮಗೂ ತೊಂದರೆಯಾಗಬಹುದು. ಹಾಗಾಗಿ ಇದನ್ನು ನಿಲ್ಲಿಸಿದರೆ ಉತ್ತಮ ಎಂದು ವಿನಂತಿಸಿದರು.
ಅಕ್ಕಪಕ್ಕದವರ ವಿನಂತಿ ಮತ್ತು ಕ್ಷೇತ್ರದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಕೊರೋನಾ ಮುಗಿಯುವವರೆಗೆ ಜನರು ತಮ್ಮ ಬಳಿ ಬರುವುದನ್ನು ತಡೆಯುವ ಸಲುವಾಗಿ ಲಕ್ಷ್ಮಿ ಹೆಬ್ಬಾಳಕರ್ ಪೊಲೀಸರಲ್ಲಿ ವಿನಂತಿಸಿಕೊಂಡು ತಮ್ಮ ಮನೆಯನ್ನೇ ಕ್ವಾರಂಟೈನ್ ಮಾಡಿಕೊಂಡಿದ್ದಾರೆ. ಪೊಲೀಸರು ಎರಡೂ ಕಡೆ ಬ್ಯಾರಿಕೇಡ್ ಹಾಕಿ ಜನರು ಬರುವುದನ್ನು ತಡೆದಿದ್ದಾರೆ.
`ನೀವು ನಾನಿದ್ದಲ್ಲಿ ಬರುವುದು ಬೇಡ. ಇದರಿಂದ ನಿಮಗೆ ತೊಂದರೆಯಾಗಬಹುದು. ನೀವು ನಿಮ್ಮ ಮನೆಯಲ್ಲೇ ಇರಿ. ನಿಮ್ಮ ಗ್ರಾಮಗಳಿಗೆ ನಾನೇ ಬರುತ್ತೇನೆ. ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಸಮಸ್ಯೆಗಳಿದ್ದಲ್ಲಿ ಫೋನ್ ಮಾಡಿದರೂ ಅದಕ್ಕೆ ನಾನು ಸ್ಪಂದಿಸುತ್ತೇನೆ’ ಎಂದು ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದ ಜನರಿಗೆ ಭರವಸೆ ನೀಡಿ, ವಿನಂತಿಸಿಕೊಂಡಿದ್ದಾರೆ.
ಪ್ರತಿ ನಿತ್ಯ ಎಲ್ಲ ಹಳ್ಳಿಗಳಿಗೆ ತಾವೇ ಸ್ವತಃ ತೆರಳಿ ಜನರ ಸಮಸ್ಯೆಗೆ ಸ್ಪಂದಿಸುವ ಜೊತೆಗೆ, ಅವರಿಗೆ ಕೊರೋನಾದ ಈ ಸಂದರ್ಭದಲ್ಲಿ ತಿಳಿವಳಿಕೆ ನೀಡುವ ಕೆಲಸವನ್ನು ಲಕ್ಷ್ಮಿ ಹೆಬ್ಬಾಳಕರ್ ಮಾಡುತ್ತಿದ್ದಾರೆ. ಅನೇಕ ಹಳ್ಳಿಗಳಲ್ಲಿ ಔಷಧ ಸಿಂಪಡಿಸುವ, ಜನರಲ್ಲಿ ಅರಿವು ಮೂಡಿಸುವ ಅಭಿಯಾನವನ್ನೂ ಮಾಡಿದ್ದಾರೆ.