ಬೆಂಗಳೂರು, ಏ. 15- ಕೋರೋನಾ ವೈರಾಣು ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ರದ್ದು ಮಾಡಿರುವುದರಿಂದ ಕೆಎಸ್‍ಆರ್‍ಟಿಸಿಗೆ 253 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಮಾರ್ಚ್ 1ರಿಂದ ನಿನ್ನೆಯವರೆಗೆ ಕೆಎಸ್‍ಆರ್‍ಟಿಸಿ ಆದಾಯದಲ್ಲಿ 253,24,19,256 ರೂ. ನಷ್ಟವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಾಕ್‍ಡೌನ್ ಮಾಡಿರುವುದರಿಂದ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ನಿಲ್ಲಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಕೆಲವು ಬಸ್‍ಗಳನ್ನು ಒದಗಿಸಲಾಗಿದೆ. ಈಗಾಗಲೇ ಮುಂಗಡ ಟಿಕೆಟ್ ಕಾಯ್ದಿರಿಸುವುದನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಟಿಕೆಟ್ ಕಾಯ್ದಿರಿಸಿದವರ ಹಣವನ್ನು ಹಿಂದಿರುಗಿಸಲಾಗುತ್ತಿದೆ.
ಬಸ್ ಸಂಚಾರ ಇಲ್ಲದಿರುವುದರಿಂದ ದಿನನಿತ್ಯವೂ ಕೆಎಸ್‍ಆರ್ಟಿಸಿಗೆ ನಷ್ಟ ಹೆಚ್ಚಾಗುತ್ತಿದೆ. ಪ್ರೀಮಿಯಂ ಬಸ್ಗಳಲ್ಲಿ ಇದುವರೆಗೆ ಸುಮಾರು 50 ಕೋಟಿ ರೂಪಾಯಿ ಆದಾಯ ನಷ್ಟವಾಗಿದ್ದರೆ, ನಾನ್ ಪ್ರೀಮಿಯಂ ಬಸ್ಗಳಿಂದ ಸುಮಾರು 203 ಕೋಟಿಗೂ ಹೆಚ್ಚು ಆದಾಯ ನಷ್ಟವಾಗಿದೆ ಎಂದು ಕೆಎಸ್‍ಆರ್ಟಿಸಿ ಮೂಲಗಳು ತಿಳಿಸಿವೆ.
ಕೋರೋನಾ ಸೋಂಕು ಹರಡುವುದನ್ನು ತಡೆಯಲು ಎಲ್ಲ ಬಸ್ ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಿ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಇದುವರೆಗೆ 30 ಲಕ್ಷಕ್ಕೂ ಹೆಚ್ಚು ಕಿ.ಮೀ.ಬಸ್ ಸಂಚಾರ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.