ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ.
ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುತ್ತಿದ್ದ ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದ ಮಂಗಗಳು ಆಹಾರ ಸಿಗದೇ ಪರಿತಪಿಸುವಂತಾಗಿದೆ
ಸಾವಿರಾರು ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಮಂಗಗಳಿಗೂ ಆಹಾರ ನೀಡುತ್ತಿದ್ದರು. ಈಗ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿಲ್ಲ. ಹೀಗಾಗಿ ಮಂಗಗಳ ಸ್ಥಿತಿ ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಮಂಗಗಳಿಗೆ ನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಈಗ ಪ್ರತಿನಿತ್ಯ ದೇವಸ್ಥಾನದಿಂದ ಮಂಗಗಳಿಗೆ ಮೂರು ಹೊತ್ತು ಶೇಂಗಾ, ಕಡಲೆ ಕಾಳು ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ.
ಆದರೆ ನಿತ್ಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರಿಂದಲು ಆಹಾರ ಸಿಗುತ್ತಿದ್ದ ಮಂಗಗಳಿಗೆ ಈಗ ಆಹಾರಕ್ಕೆ ಅಲೆದಾಡುವಂತ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ದೇವಸ್ಥಾನದ ಕೆಳಗೆ ಇರುವ ಮಂಗಗಳು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಆಹಾರ ತಿಂದು ಜೀವ ಉಳಿಸಿಕೊಂಡಿವೆ. ಆದ್ರೆ ಬೆಟ್ಟದ ಮೇಲಿರುವ ಸಾವಿರಾರು ಮಂಗಗಳು ಆಹಾರ, ನೀರು ಸಿಗದೇ ನರಳಾಡುತ್ತಿವೆ.