ಮಂಗಳೂರು: ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಅವರನ್ನ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಾದರಾಯನಪುರ ಗಲಾಟೆ ವಿಚಾರದಲ್ಲಿ ಶಾಸಕ ಜಮೀರ್ ಅಹ್ಮದ್ ನೀಡಿದ ಹೇಳಿಕೆ ವಿಚಾರ ಹಾಗೂ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಘಟನೆ ನಡೆದಾಗ ಶಾಸಕ ಜಮೀರ್ ತೆಗೆದುಕೊಂಡ ನಿರ್ಧಾರ ಮತ್ತು ವರ್ತನೆ ಕಾನೂನು ಬಾಹಿರವಾಗಿದೆ. ಅಲ್ಲಿನ ಗೂಂಡಾಗಿರಿಗೆ ಶಾಸಕನಾಗಿ ಬೆಂಗಾವಲಾಗಿ ನಿಂತಿರುವುದು ಕಾನೂನಿಗೆ ವಿರುದ್ಧ ಎಂದು ಆಕ್ರೋಶ ಹೊರ ಹಾಕಿದರು.
ಅಧಿಕಾರಿಗಳನ್ನ ಬೆದರಿಸಿ ನನ್ನ ಅನುಮತಿ ಪಡೆದು ಬನ್ನಿ ಎನ್ನುವುದಕ್ಕೆ ಇದು ಸರ್ವಾಧಿಕಾರಿ ರಾಷ್ಟ್ರವಲ್ಲ. ವೀಸಾ ಮುಗಿದ ಮೇಲೂ ಅಲ್ಲಿ ಕೆಲವರು ಇದ್ದಾರೆ. ಅವರೆಲ್ಲಾ ಜಮೀರ್ ಅಹ್ಮದ್ ಅನುಮತಿ ಪಡೆದು ಕೂತಿದ್ದಾರೆ. ಅವರ ರಕ್ಷಣೆ ಜಮೀರ್ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ನಾನು ಸಿಎಂ ಯಡಿಯೂರಪ್ಪ ಮತ್ತು ಸರ್ಕಾರದ ಬಳಿ ಮಾತನಾಡಿ, ಜಮೀರ್ ಅಹ್ಮದ್ ಮೇಲೆ ಕೇಸು ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ವಿನಂತಿ ಮಾಡ್ತೇನೆ ಎಂದು ಹೇಳಿದರು.
ಜಮೀರ್ ಅವರು ಹೀಗೆ ಮಾತನಾಡುತ್ತಿರುವುದು ಇದು ಮೊದಲ ಬಾರಿ ಅಲ್ಲ. ಹತ್ತಾರು ಬಾರಿ ದೇಶದ್ರೋಹ, ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ. ಅವರನ್ನು ತಕ್ಷಣ ಜೈಲಿಗೆ ಹಾಕುವ ಕೆಲಸ ಆಗಬೇಕು. ಅವರು ಕಾಂಗ್ರೆಸ್ ಪಕ್ಷಕ್ಕೂ ಅವಮಾನ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಕೂಡ ಅವರನ್ನ ಉಚ್ಛಾಟನೆ ಮಾಡಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾದರಾಯಣಪುರ ಪ್ರಕರಣದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಸ್ವಾಗತಾರ್ಹ. ಇದಕ್ಕಾಗಿ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರವನ್ನ ಅಭಿನಂಧಿತ್ತೇನೆ ಎಂದರು.