ಕಾರವಾರ: ಕೊರೊನಾ ವೈರಸ್‍ಗೆ ರಾಜ್ಯದ ಜನ ಭಯಗೊಂಡಿದ್ದರೆ ಇತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ)ಯಿಂದ ಜನರು ಭಯಪಟ್ಟು ಊರು ಬಿಡುತ್ತಿದ್ದಾರೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಜನರೀಗ ಕೆ.ಎಫ್.ಡಿ ವೈರಸ್‍ಗೆ ಭಯಪಟ್ಟು ಊರು ತೊರೆಯುತಿದ್ದಾರೆ. ವಿಧಾನಸಭಾ ಸ್ಪೀಕರ್ ಕಾಗೇರಿಯವರ ಸ್ವಕ್ಷೇತ್ರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳಗೋಡು, ಮಳಗುಳಿ, ಹನುಮನಜಡ್ಡಿ, ಹೊನ್ನೆಗಟಗಿ, ತ್ಯಾಗಲಿಗಳಲ್ಲಿ 200ಕ್ಕೂ ಹೆಚ್ಚು ಮಂಗಗಳು ಈ ವರ್ಷ ಸಾವನ್ನಪ್ಪಿದ್ದು ಇವುಗಳಲ್ಲಿ ಹಲವು ಮಂಗಗಳಲ್ಲಿ ಕೆ.ಎಫ್.ಡಿ ವೈರಸ್ ಪತ್ತೆಯಾಗಿದೆ.ಈ ವೈರಸ್ ಜನರಿಗೂ ಹಬ್ಬುತ್ತಿದ್ದು ಈ ಗ್ರಾಮದಲ್ಲಿ ಈಗಾಗಲೇ 11 ಜನರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಇದೇ ತಿಂಗಳಲ್ಲಿ ಮಳಗುಳಿ ಗ್ರಾಮದ ಭಾಸ್ಕರ್ ಗಣಪತಿ ಹೆಗಡೆ ಎಂಬುವವರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಜಿಲ್ಲೆಯಲ್ಲಿ 87 ಪ್ರಕರಣಗಳು ವರದಿಯಾಗಿದ್ದು, ಸಿದ್ದಾಪುರ ತಾಲೂಕಿನಲ್ಲಿಯೇ 15 ಜನರಿಗೆ ಮಂಗನಕಾಯಿಲೆ ಬಂದಿದ್ದು, ಇದರಲ್ಲಿ ಆರು ಜನರು ಸಾವನ್ನಪ್ಪಿದ್ದರು. ಹೀಗಾಗಿ ಸಿದ್ದಾಪುರ ತಾಲೂಕಿನ ಮಂಗನಕಾಯಿಲೆ ಪೀಡಿತ ಪ್ರದೇಶವಾದ ಬಾಳಗೋಡು ಸೇರಿದಂತೆ ಹಲವು ಗ್ರಾಮದಲ್ಲಿ ಜನರು ಮನೆ ಬಿಡುತಿದ್ದು ಊರಿನಲ್ಲಿ ಬಿಕೋ ಎನ್ನುತ್ತಿದೆ.
ಸಿದ್ದಾಪುರ ಭಾಗದಲ್ಲಿ ಚಿಕಿತ್ಸೆ ನೀಡಲು ವೈದ್ಯರ, ಸಿಬ್ಬಂದಿ ಕೊರತೆ ಎದುರಾಗಿದೆ. ಜೊತೆಗೆ ಇಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೂಡ ಮುಂದೆ ಬರುತ್ತಿಲ್ಲ ಹೀಗಾಗಿ ಆರೋಗ್ಯ ಇಲಾಖೆ ಸಹ ತೊಂದರೆ ಅನುಭವಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲು ತೊಡಕಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಕಾಗೇರಿಯವರೇ ನಮ್ಮ ನೋವು ಕೇಳಿ
ವಿಧಾನಸಭಾ ಸ್ಪೀಕರ್ ಸ್ವಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮಂಗನಕಾಯಿಲೆ ಪ್ರಕರಣ ಪತ್ತೆಯಾಗುತ್ತಿದ್ದು ಜನರು ಊರು ಬಿಡುತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಈ ಪ್ರದೇಶದಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಗೂ ಕಳೆದ ವರ್ಷ ಮರಣ ಹೊಂದಿದ ಜನರಿಗೆ ಪರಿಹಾರ ಕೊಡಿಸಲು ಸ್ಪೀಕರ್ ಕಾಗೇರಿ ಎಡವಿದ್ದಾರೆ. ಈವರೆಗೂ ಕ್ಷೇತ್ರಕ್ಕೆ ಬರುವುದಿರಲಿ ಇದರ ಬಗ್ಗೆ ಗಮನ ಹರಿಸುವ ಗೋಜಿಗೆ ಹೋಗದೇ ತಮ್ಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.