ಕಲಬುರ್ಗಿ(ಏ.11): ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗಿಯಾದ ಕೆಲವರು ಮಾತ್ರ ಮಾಹಿತಿ ನೀಡಿದ್ದಾರೆ. ಆದರೆ ಮತ್ತೆ ಕೆಲವರು ತಪ್ಪಿಸಿಕೊಂಡು ಅಡ್ಡಾಡುತ್ತಿದ್ದಾರೆ. ಹಾಗೆ ತಪ್ಪಿಸಿಕೊಂಡು ಅಡ್ಡಾಡುವವರನ್ನು ಜೈಲಿಗೆ ಕಳುಹಿಸಿ ಎಂದು ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.
ಕೊರೋನಾ ಹಿನ್ನೆಲೆಯಲ್ಲಿ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿ, ಮಾಹಿತಿ ನೀಡದೇ ತಪ್ಪಿಸಿಕೊಂಡು ತಿರುಗುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಲಾಕ್ ಡೌನ್ ಜಾರಿಯಲ್ಲಿದ್ದರೂ ಅನಗತ್ಯವಾಗಿ ಅಡ್ಡಾಡುವವರನ್ನು ಹಿಡಿದು ಒಳಗೆ ಹಾಕುವುದಾಗಿ ಎಚ್ಚರಿಸಿದರು. ಜನ ಮನೆಯಿಂದ ಹೊರಗೆ ಬರದಿರುವುದೇ ದಿವ್ಯ ಔಷಧ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಪಾಲಿಸಬೇಕು. ಆದರೆ, ಜನ ನಿರೀಕ್ಷಿತ ಮಟ್ಟದಲ್ಲಿ ಸಹಕರಿಸುತ್ತಿಲ್ಲ. ಸಹಕರಿಸುವಂತೆ ಕೈಮುಗಿದು ಕೇಳ್ಳುತ್ತೇನೆ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 18 ಸಾವಿರ ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಇದುವರೆಗೂ 11 ಜನರಿಗೆ ಪಾಸಿಟಿವ್ ಬಂದಿದೆ. 673 ಜನ ಕ್ವಾರಂಟೈನ್ ಮತ್ತು ಸೆಲ್ಫ್ ರಿಪೋರ್ಟಿಂಗ್ ಅವಧಿ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಕಲಬುರ್ಗಿಯಲ್ಲಿ ಸೀಲ್ ಡೌನ್ ಜಾರಿಯ ಅವಶ್ಯಕತೆಯಿಲ್ಲ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕೆಲವೆಡೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೂ ಹಲ್ಲೆಗೆ ಯತ್ನಿಸಿದ ಘಟನೆಗಳು ಬೆಳಕಿಗೆ ಬಂದಿದ್ದು, ಅಂಥವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮತ್ತೊಂದು ಕೊರೋನಾ ಪಾಸಿಟಿವ್
ಕಲಬುರ್ಗಿ ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 11ಕ್ಕೇರಿದೆ. ಖಾಸಗಿ ಆಸ್ಪತ್ರೆಯ ಆಯಾಳಿಗೆ ಸೋಂಕಿರೋದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಬಹುಮನಿ ಆಸ್ಪತ್ರೆಯ ಆಯಾಳಾಗಿದ್ದ 38 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕಿರೋದು ದೃಢಪಟ್ಟಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.ಕೊರೋನಾ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಕೊರೋನಾ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ಬಹುಮನಿ ಆಸ್ಪತ್ರೆಯಲ್ಲಿ ಈ ಮಹಿಳೆ ಆಯಾಳಾಗಿ ಕೆಲಸ ಮಾಡುತ್ತಿದ್ದಳು. ಬಹುಮನಿ ಆಸ್ಪತ್ರೆಯಿಂದ ಇ.ಎಸ್.ಐ. ಆಸ್ಪತ್ರೆಗೆ ದಾಖಲಿಸಿದ ನಂತರ 65 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದ. ಆ ವ್ಯಕ್ತಿಯಿಂದಲೇ ಸೋಂಕು ಹರಡಿದ್ದು, ಇ.ಎಸ್.ಐ. ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಹಣ ಪಡೆದು ಪಡಿತರ ನೀಡುವವರ ಲೈಸನ್ಸ್ ರದ್ದು ಮಾಡಿ:
ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಹೆಚ್ಚಿಗೆ ಹಣ ಪಡೆದು ಅಥವಾ ಕಡಿಮೆ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಣೆ ಮಾಡುತ್ತ ಪಡಿತರದಾರರಿಗೆ ಅನಗತ್ಯ ತೊಂದರೆ ನೀಡುತ್ತಿರುವ ನ್ಯಾಯಬೆಲೆ ಅಂಗಡಿದಾರರ ಲೈಸನ್ಸ್ ರದ್ದು ಮಾಡುವಂತೆ ಡಿಸಿಎಂ ಗೋವಿಂದ ಕಾರಜೋಲ ಸೂಚಿಸಿದದಾರೆ.
ಎರಡು ತಿಂಗಳ ಧಾನ್ಯವನ್ನು ಒಂದೇ ಬಾರಿ ನೀಡುವಂತೆ ಸರ್ಕಾರ ಸೂಚಿಸಿದ್ದರೂ, ಕಡಿಮೆ ಧಾನ್ಯ ನೀಡಿ, ಅದಕ್ಕೂ ಹಣ ಪಡೆಯುತ್ತಿರುವುದರ ಬಗ್ಗೆ ಆಳಂದ ಶಾಸಕ ಸುಭಾಷ್ ಗುತ್ತೇದಾರ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಆಳಂದ ತಾಲೂಕಿನ ಸಾವಳೇಶ್ವರ, ಹಿತ್ತಲಶಿರೂರ ಮತ್ತು ವಾಗ್ಧರಿ, ಜೇವರ್ಗಿ ತಾಲೂಕಿನ ಶಾಖಾಪುರ ಎಸ್.ಎ ಹಾಗೂ ಕಲಬುರಗಿ ತಾಲೂಕಿನ ರಾಜಾಪುರ ಪಡಿತರ ಅಂಗಡಿಗಳ ಲೈಸನ್ಸ್ ನ್ನು ತಕ್ಷಣವೆ ಅಮಾನತ್ತು ಮಾಡುವಂತೆ ಆದೇಶಿಸಿದ್ದಾರೆ.
ಅಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಪಡಿತರ ವಿತರಣೆಗೆ ಕ್ರಮ ವಹಿಸಬೇಕು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಿ.ಎಂ.ಪಾಣಿ ಅವರಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ 18 ಸಾವಿರ ಜನರ ಪಡಿತರ ಅರ್ಜಿ ತಿರಸ್ಕೃತಗೊಂಡಿರೋದಕ್ಕೆ, ಇಷ್ಟೇಕೆ ತಿರಸ್ಕರಿಸಿದ್ದೀರಿ ಎಂದು ಕಾರಜೋಳ ಪ್ರಶ್ನಿಸಿದ್ದಾರೆ. 18 ಸಾವಿರ ಜನರಿಗೆ ತಾತ್ಕಾಲಿಕ ಪಡಿತರ ಚೀಟಿ ವಿತರಿಸಿ. ಎರಡು ತಿಂಗಳ ಕಾಲ ಉಚಿತವಾಗಿ ಧಾನ್ಯ ವಿತರಿಸಿ. ನಂತರ ಬೇಕಿದ್ದರೆ ಅರ್ಜಿಗಳನ್ನು ಪರಿಶೀಲಿಸಿ, ಅರ್ಹರಿಗೆ ಪರ್ಮನೆಂಟ್ ಪಡಿತರ ಚೀಟಿ ವಿತರಿಸಿ. ಅಲೆಮಾರಿಗಳಿಗೂ ಊಟದ ಬದಲು ರೇಷನ್ ನೀಡಿ. ಯಾರೂ ಉಪವಾಸದಿಂದ ಉಳಿಯಬಾರದೆಂದು ಅಧಿಕಾರಿಗಳಿಗೆ ಕಾರಜೋಳ ಸೂಚನೆ ನೀಡಿದ್ದಾರೆ.