ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಸಂಗೀತ ಮಾಂತ್ರಿಕ ಹಂಸಲೇಖ ಅವರು ರಸ್ತೆ ಗುಂಡಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ಮಹಾಲಕ್ಷ್ಮೀ ಲೇಔಟ್‍ನಲ್ಲಿರುವ ಹಂಸಲೇಖ ಅವರ ಮನೆ ಪಕ್ಕದಲ್ಲಿರುವ ಪಾರ್ಕಿಗೆ ಬಿಬಿಎಂಪಿಯವರು ಪೈಪ್ ಲೈನ್ ಹಾಕಲು ರಸ್ತೆಯಲ್ಲಿ ಗುಂಡಿ ತೆಗೆದಿದ್ದರು. ಕಾಮಗಾರಿ ಮುಗಿದ ಬಳಿಕ ಮಣ್ಣು ಹಾಕಲಾಗಿತ್ತು. ಆದರೆ ಗುಂಡಿ ಹಾಗೆ ಉಳಿದಿದ್ದರಿಂದ ಸವಾರರಿಗೆ ಕಿರಿಕಿರಿ ಉಂಟಾಗಿತ್ತು. ಅಷ್ಟೇ ಅಲ್ಲದೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.
ರಸ್ತೆಯಲ್ಲಿ ಗುಂಡಿ ಇರುವುದನ್ನು ಗಮನಿಸಿದ ಹಂಸಲೇಖ ಅವರು ತಲೆಗೆ ವಸ್ತ್ರ ಸುತ್ತಿಕೊಂಡು, ಸ್ವತಃ ಸಲಿಕೆ, ಪುಟ್ಟಿ ಹಿಡಿದು ಜಲ್ಲಿ ತುಂಬಿ ಗುಂಡಿಗೆ ಹಾಕಿದ್ದಾರೆ. ಬಳಿಕ ಕಲ್ಲಿನ ಪುಡಿ ಹಾಕಿ, ನೀರು ಬಿಟ್ಟು ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿದ್ದಾರೆ. ಹಂಸಲೇಖ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ನಟ, ನಟಿಯರು, ಸೆಲೆಬ್ರಿಟಿಗಳು, ಆಟಗಾರರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಹಂಸಲೇಕ ಅವರು ಕೊರೊನಾ ವೈರಸ್ ವಿಚಾರವಾಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡಿನಲ್ಲಿ ನಾದಬ್ರಹ್ಮ ಕೊರೊನಾ ವೈರಸ್ ಅನ್ನು ತರಾಟೆ ತೆಗೆದುಕೊಂಡಿದ್ದರು.
‘ಮಕ್ಕಳೇ, ಭಯಪಡಬೇಡಿ ಕೊರೊನಾ ವೈರಸ್ ಒಂದು ರೋಗ, ಕ್ರಿಮಿ, ಅದೊಂದು ವೈರಸ್. ಈ ರೀತಿಯ ವೈರಸ್‍ಗಳು ಈಗಾಗಲೇ ಹಲವು ಬಂದಿವೆ. ಈ ರೀತಿಯ ವೈರಸ್‍ಗಳು ಭೂಮಿಗೆ ಎಷ್ಟೋ ಬಂದಿವೆ, ಹೋಗಿವೆ. ಹಾಗೆಯೇ ಈ ವೈರಸ್ ಕೂಡ ಹೋಗುತ್ತವೆ. ಈ ಕೊರೊನಾ ವೈರಸ್‍ಗೆ ಸೆಂಡಪ್ ಮಾಡೋಣ, ಬೈ ಬೈ ಹೇಳೋಣ’ ಎಂದು ಹಂಸಲೇಖ ಹೇಳಿದ್ದರು.