ನನ್ನ ಮಾಧ್ಯಮ ಗೆಳೆಯ #ಗೋವಿಂದ್ ಇಂದು ನನಗೆ ಹೇಳಿದ ವಿಷಯ ಇಲ್ಲಿ ಹಂಚಿಕೊಳ್ಳುವುದಕ್ಕೆ ಅತ್ಯಂತ ಯೋಗ್ಯವೆನಿಸಿದೆ.
ಗೋವಿಂದ್ #ಪ್ರಜಾಟಿವಿಚಾನೆಲ್ ನ ಅನುಭವೀ ವರದಿಗಾರ.
ಕಳೆದ ಶುಕ್ರವಾರ 13,3,2020 ದಂದು ಬೆಂಗಳೂರಿನ ಬಾಣಸವಾಡಿಯಲ್ಲಿರುವ ತನ್ನ ಮನೆಯನ್ನು ಬೆಳಿಗ್ಗೆ 5.30 ಗೆ ಬಿಟ್ಟ ಗೋವಿಂದ್ ಕೇವಲ ಎರಡೂವರೆ ದಿನಗಳಲ್ಲಿ ಮೈಸೂರಿಗೆ ನಡೆದು 15.3.2020, ಭಾನುವಾರದಂದು ಸಂಜೆ 5.30 ಗಂಟೆಗೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ತನ್ನ ಮನದಾಳದ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ.
ಮೊದಲ ರಾತ್ರಿ ರಾಮನಗರ, ಎರಡನೆಯ ರಾತ್ರಿ ಮಂಡ್ಯ ಗಳಲ್ಲಿ ತಂಗಿ ಈ ಪಯಣವನ್ನು ಪೂರ್ಣಗೊಳಿಸಿದ ಗೋವಿಂದ್ ರ ಕಾಲುಗಳು ಬೊಬ್ಬೆ ಬಂದರೂ ಛಲ ಬಿಡದೆ ನಡೆದ ಕಥೆ ನಿಜಕ್ಕೂ ಅಚ್ಚರಿ ಮತ್ತು ಗೌರವ ಉಂಟು ಮಾಡುತ್ತದೆ. (ಇಂದಿಗೂ ಆ ಬೊಬ್ಬೆಗಳ ಚಿನ್ಹೆ ಹಾಗೇ ಉಳಿದಿದೆ).
ಸೋಮವಾರ ವಿಧಾನಮಂಡಲ ಪ್ರಾರಂಭವಾಗುವ ಮುನ್ನ ಬೆಂಗಳೂರಿನಲ್ಲಿ ತನ್ನ ವೃತ್ತಿಪ್ರಮೇಯ ಇರಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಈ ಸುಮಾರು 145 km ದೂರದ ಪಯಣ ಕೇವಲ ಎರಡೂವರೆ ದಿನಗಳಲ್ಲಿ ಪೂರ್ಣಗೊಂಡಿದೆ.
ನಾನು ಬೆಂಗಳೂರಿನಿಂದ ತಿರುಪತಿ, ಧರ್ಮಸ್ಥಳ ಹಾಗೂ ಶಬರಿಮಲೆಗೆ ನಡೆದಿರುವ ಸ್ವಂತ ಅನುಭವವುಳ್ಳವನು. ನನ್ನ ಒಂದು ದಿನದ ಅತಿ ದೀರ್ಘ ದೂರ ಪಯಣವೆಂದರೆ 47 ಕಿ.ಮೀ. ಆದ್ದರಿಂದಲೇ ಗೋವಿಂದ್ ರ ಈ ಸಾಹಸ ಕೇಳಿ ನನ್ನ ಹುಬ್ಬೇರಿತು.
ಅಂದಹಾಗೆ ಈ ಕ್ಷಿಪ್ರವೇಗದ ಪಾದಯಾತ್ರೆಗೆ ಕಾರಣ?
ಕೊರೋನಾ ವೈರಸ್ ಸೇರಿದಂತೆ (ಆರ್ಥಿಕ ಪರಿಸ್ಥಿತಿಯೂ ಸೇರಿದಂತೆ) ರಾಜ್ಯ-ರಾಷ್ಟ್ರ ಎದುರಿಸುತ್ತಿರುವ ಅನೇಕ ಸಂಕಷ್ಟಗಳಿಂದ ಕಾಪಾಡು ತಾಯೇ ಎಂದು ತನ್ನ ಅಳಲನ್ನು ತಾಯಿ ಚಾಮುಂಡೇಶ್ವರಿಯ ಪಾದಗಳಲ್ಲಿ ಅರುಹಲು ಈ ಪಾದಯಾತ್ರೆ ಕೈಗೊಂಡಿದ್ದು.
ಭಲೇ ಗೋವಿಂದ್! ನನ್ನ ತುಂಬು ಮನಸ್ಸಿನ ಶಹಭಾಸ್ ನಿಮಗೆ.