Breaking News
Home / ಅಂತರಾಷ್ಟ್ರೀಯ / ಇಂದು ವಿಶ್ವಜಲ ದಿನ: ನೀರು ಜೀವ ಸಂಕುಲಕ್ಕೆ ಸಂಜೀವಿನಿ, ಜೀವಜಲ ರಕ್ಷಿಸಿ-ಮನುಕುಲ ಉಳಿಸಿ

ಇಂದು ವಿಶ್ವಜಲ ದಿನ: ನೀರು ಜೀವ ಸಂಕುಲಕ್ಕೆ ಸಂಜೀವಿನಿ, ಜೀವಜಲ ರಕ್ಷಿಸಿ-ಮನುಕುಲ ಉಳಿಸಿ

Spread the love

ಸೃಷ್ಟಿಯ ಮೂಲವೇ ಪಂಚಭೂತಗಳು. ಪಂಚಭೂತಗಳಿಲ್ಲದೆ ಯಾವುದೇ ಜೀವಿಯೂ ಜೀವಿಸಲು ಸಾಧ್ಯವಿಲ್ಲ. ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು ಈ ಪಂಚಭೂತಗಳಿಂದಲೇ ಪ್ರಕೃತಿಯ ಸೃಷ್ಟಿಯಾಗಿದೆ. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಪ್ರತಿ ಜೀವ ಸಂಕುಲಕ್ಕೂ ಸಂಜೀವಿನಿ. ಕ್ರಿಮಿಕೀಟಾದಿ, ಗಿಡ-ಮರಗಳಿಗೂ ನೀರು ಅತ್ಯಗತ್ಯ.

ಇತಿಹಾಸ ಕೆದಕಿದಾಗ ಈಜಿಫ್ಟ್ ಸಿಂಧೂ, ಹರಪ್ಪ, ಮಹೆಂಜೊದಾರೊನಂತಹ ನಾಗರೀಕತೆಗಳು ಹುಟ್ಟಿದ್ದು ನದಿಯ ಪಾತ್ರಗಳಲ್ಲೇ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ.
ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಅವರಿಸಿದ್ದರೂ ಇಡೀ ಜಗತ್ತಿನಾದ್ಯಂತ ನೀರಿನ ಸಮಸ್ಯೆ ಎದುರಿಸುತಿದ್ದೇವೆ. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆ ಹಾಗೂ ಅಮೂಲ್ಯತೆಯನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಇಡೀ ಬದುಕೇ ನಾಶವಾಗುವ ಸ್ಥಿತಿ ಎದುರಾಗಬಹುದು.

ಇಂದು ಜಗತ್ತಿನಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಲು ಮುಖ್ಯ ಕಾರಣ ಮನುಷ್ಯನ ಅತಿಯಾದ ದುರಾಸೆ, ತೀವ್ರಗತಿಯ ಅರಣ್ಯ ನಾಶ, ಮಿತಿಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ ಮತ್ತು ನಾವು ಪರಿಸರದ ಮೇಲೆ ತೋರುತ್ತಿರುವ ಕೌರ್ಯ. ಇದರಿಂದ ಕ್ಷಣ ಕ್ಷಣಕ್ಕೂ ಹಸಿರು ಮನೆಯ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಿದೆ.
ಜೀವ ದ್ರವವೆನಿಸಿರುವ ನೀರನ್ನು ಮಾನವ ಪ್ರಜ್ಞಾ ಪೂರ್ವಕವಾಗಿಯೇ ಕಲುಷಿತಗೊಳಿಸುತ್ತಿರುವುದಲ್ಲದೆ, ಅದರ ಬಳಕೆ ಹಾಗೂ ಸಂರಕ್ಷಣೆಗೆ ಸೂಕ್ತ ವಿವೇಚನೆ ಇಲ್ಲದೆ ಭವಿಷ್ಯದ ನಾಗರಿಕರನ್ನು ಆತಂಕದ ವಿಷ ವರ್ತುಲಕ್ಕೆ ಸಿಲುಕಿಸುತ್ತಿದ್ದಾನೆ.

ನೀರಿನ ಪ್ರಧಾನ ಮೂಲವಾದ ಮಳೆ ಹವಾಮಾನ ವ್ಯೆಪರೀತ್ಯಗಳಿಗೆ ಸಿಲುಕಿ ಒದ್ದಡುತ್ತಿದ್ದು, ಪ್ರಮುಖ ನದಿ- ಜಲಾಶಯಗಳೇ ಬರಿದಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಜಲ ಸಂರಕ್ಷಣೆ ಉತ್ತಮ ಸಮಾಜದ ಜವಾಬ್ದಾರಿಯಾಗಿದೆ. ಜಲ ಸಂರಕ್ಷಣೆ ಬಗ್ಗೆ ಇನ್ನೂ ನಿರ್ಲಕ್ಷ್ಯ ತೋರಿದರೆ ಮುಂದಿನ ಪೀಳಿಗೆಗೆ ನೀರಿನ ಸೆಲೆಯೇ ಇಲ್ಲದಂತಾಗುತ್ತದೆ.ನೈಸರ್ಗಿಕವಾಗಿ ದೊರೆಯುವ ಸಂಪತ್ತನ್ನು ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ಹಾಳು ಮಾಡುತ್ತ ಹೋದರೆ ನಿಸರ್ಗದ ಸಮತೋಲನಕ್ಕೆ ಧಕ್ಕೆಯುಂಟಾಗುತ್ತದೆ.

ನಮ್ಮ ಮುಂದಿನ ಪೀಳಿಗೆಗಳಿಗೂ ನಮ್ಮಿಂದ ಏನಾದರೂ ಬಳುವಳಿ ಬೇಕಲ್ಲವೆ? ಎಲ್ಲರಂತೆ ಬದುಕಲು ಮೂಲಭೂತ ಸೌಕರ್ಯಗಳು ಅವರಿಗೂ ಬೇಕಲ್ಲವೆ?ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮಿಂದ ಕಷ್ಟ ಸಾಧ್ಯ. ಆದರೆ, ಅದಕ್ಕೆ ಪರಿಹಾರ ಹುಡುಕುವುದು ನಮ್ಮ ಜವಾಬ್ದಾರಿಯಾಗಿದೆ.

#ಕಾಡಿನ ರಕ್ಷಣೆಯಿಂದ ಜಲ ಸಂರಕ್ಷಣೆ: ಹೆಚ್ಚು ಹೆಚ್ಚು ಅರಣ್ಯ ಪ್ರದೇಶ ಇದ್ದರೆ ಮಳೆ ಮೋಡಗಳನ್ನು ಒಂದೆಡೆ ತಡೆದು ಮಳೆ ಸುರಿಸುತ್ತವೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಕೆರೆ -ಕಟ್ಟೆಗಳು ತುಂಬುವುದರೊಂದಿಗೆ ಅಂತರ್ಜಲ ವೃದ್ಧಿಯಾಗಿ ಭೂಮಿಯನ್ನು ಸದಾಕಾಲ ತಂಪಾಗಿರುವಂತೆ ಮಾಡುತ್ತದೆ. ಅರಣ್ಯ ಪ್ರದೇಶದಲ್ಲಿನ ಮರಗಳ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದುಟ್ಟುಕೊಂಡಿರುತ್ತದೆ. ಇದರಿಂದ ಮೇಲ್ಮೈ ಮಣ್ಣು ನೀರಿನೊಂದಿಗೆ ನದಿ, ಸರೋವರ ಸೇರುವುದು ತಪ್ಪುತ್ತದೆ.

#ಅಂತರ್ಜಲ ವೃದ್ಧಿ: ನೆಲದಾಳದ ನೀರಿನ ಬಗ್ಗೆ ಮಹಾಭಾರತದಲ್ಲಿ ವಿಶಿಷ್ಟವಾದ ಉಲ್ಲೇಖವಿದೆ. ಭೀಷ್ಮನ ದಾಹವನ್ನು ತಣಿಸಲು ಅರ್ಜುನ (ಗಾಂಡೀವಾ) ಬಾಣವನ್ನು ನೆಲಕ್ಕೆ ಬಿಟ್ಟು ಜಲ ಉಕ್ಕುವಂತೆ ಮಾಡಿದ ಪ್ರಸಂಗದ ವರ್ಣನೆ ಅಂತರ್ಜಲದ ಮಹತ್ವನ್ನು ತೋರಿಸುತ್ತದೆ. ಆಪತ್ಕಾಲಕ್ಕೆ ಜೀವ ನೀಡುವುದು ಅಂತರ್ಜಲ ಎಂಬ ಮಾತಿದೆ. ಆದರೆ, ಇಂದು 1000 ದಿಂದ 1500 ಅಡಿ ಭೂಮಿ ನೀರು ಸಿಗುತ್ತಿಲ್ಲ ಎಂಬುದು ವಿಷಾದನೀಯ ಸಂಗತಿಯಾಗಿದೆ. ಅಂತರ್ಜಲವನ್ನು ಸಹ ನಾವು ಹಿತಮಿತವಾಗಿ ಉಪಯೋಗಿಸುವುದನ್ನು ಅರಿಯಬೇಕಿದೆ.

#ಮಳೆ ನೀರಿನ ಕೊಯ್ಲು: ನೈಸರ್ಗಿಕವಾಗಿ ಮಳೆ ನೀರನ್ನು ಸಂಗ್ರಹಿಸಿ ಅದನ್ನು ಮರು ಬಳಕೆ ಮಾಡುವ ವ್ಯವಸ್ಥೆಯನ್ನು ಮಳೆ ನೀರಿನ ಕೊಯ್ಲು ಎನ್ನುತ್ತಾರೆ.ಮಳೆಯಿಂದ ಮನೆ ಮೇಲಿಂದ ಹರಿದು ಬರುವ ನೀರನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಪೈಪುಗಳ ಮೂಲಕ ಬಾವಿಯಲ್ಲಿ ಶೇಖರಿಸಿ ಮತ್ತೆ ಬಳಕೆ ಮಾಡುವುದು ಮತ್ತು ಸಂಗ್ರಹವಾದ ನೀರನ್ನು ಭೂಮಿಗೆ ಇಂಗಿಸುವದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ, ಹಳ್ಳ – ಕೊಳ್ಳಗಳಿಗೆ ತಡೆ ಗೋಡೆ, ಚೆಕ್ ಡ್ಯಾಮ್ ಗಳನ್ನು ನಿರ್ಮಿಸುವುದರಿಂದ ನೀರನ್ನು ಸಂಗ್ರಹಿಟ್ಟುಕೊಂಡು ನೀರಿನ ಅಭಾವದ ಸಮಯದಲ್ಲಿ ಬಳಸಿಕೊಳ್ಳಬಹುದು.

#ನೀರಿನ ಮಾಲಿನ್ಯ ಮಾಡುವ ಹಾಗೂ ನೀರಿಗೆ ವಿಷಯುಕ್ತ ಪದಾರ್ಥಗಳನ್ನು ಬೆರೆಸುವಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು. #ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳ ತ್ಯಾಜ್ಯ ಹಾಗೂ ವಿಷಯುಕ್ತ ರಾಸಾಯನಿಕ ಪದಾರ್ಥಗಳು ನೀರಿನ ಮೂಲಗಳಿಗೆ ಸೇರದಂತೆ ಎಚ್ಚರ ವಹಿಸಬೇಕು. ಈಗಾಗಲೇ ರಾಜ್ಯ ರಾಜ್ಯಗಳ ನಡುವೆ ನೀರಿಗಾಗಿ ಹೋರಾಟಗಳು ನಡೆಯುತ್ತಿವೆ. ಇದೇ ರೀತಿ ಮುಂದುವರೆದರೆ ಮೂರನೆ ಮಹಾಯುದ್ಧಕ್ಕೆ ನೀರೇ ನಾಂದಿಯಾಗಬಹುದು.

ಈ ಸಮಸ್ಯೆ ಎದುರಾಗಬಹುದೆಂದು ಅರಿತ ವಿಶ್ವ ಸಂಸ್ಥೆಯು ನೀರಿನ ಅಗತ್ಯತೆ ಮತ್ತು ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. ಇಂತಹ ದಿನದಂದು ನಾವು ಜೀವಜಲ ರಕ್ಷಿಸಿ ಮನುಕುಲ ಉಳಿಸಲು ಬದ್ಧ ಎಂದು ಪ್ರತಿಜ್ಞೆ ಮಾಡೋಣ….


Spread the love

About Laxminews 24x7

Check Also

ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Spread the love ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಎ. 19ರಂದು(ಶುಕ್ರವಾರ) ನಡೆಯಲಿದ್ದು, ಬುಧವಾರ ಸಂಜೆ ಬಹಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ