ದಾವಣಗೆರೆ: ಕೊರೊನಾ ಅಬ್ಬರದ ಮಧ್ಯೆ ವರುಣರಾಯ ಕೂಡ ರಾಜ್ಯದ ಕೆಲವೆಡೆ ಅಬ್ಬರಿಸಿದ್ದಾನೆ. ಧಾರವಾಡ, ಶಿವಮೊಗ್ಗ, ದಾವಣಗೆರೆ, ವಿಜಯಪುರ ಸೇರಿ ಹಲವೆಡೆ ಧಾರಕಾರ ಮಳೆಯಾಗಿದೆ. ಆದರೆ ದಾವಣಗೆರೆಯಲ್ಲಿ ರಾತ್ರಿ ಇಡೀ ಸತತ ಮಳೆ ಸುರಿದಿದ್ದು, ಬಹುತೇಕ ಮನೆಗಳಿಗೆ ನೀರು ನುಗ್ಗಿದೆ.
ದಾವಣಗೆರೆ ನಗರದ ಬೇತೂರ ರಸ್ತೆಯ ಆನೆಕೊಂಡ ಎಕೆ ಕಾಲೋನಿಯ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ ಜನರು ರಾತ್ರಿ ಇಡೀ ಜಾಗರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಕಡೆ ರಸ್ತೆಯಲ್ಲಿ ನೀರು ತುಂಬಿದೆ. ದೇವರಾಜ ಅರಸು ಬಡಾವಣೆ, ಬಿಜೆ ಬಡಾವಣೆ ಬೂದಿಹಾಳ್ ರಸ್ತೆಯ ಮನೆಗಳಿಗೂ ನೀರು ನುಗ್ಗಿತ್ತು. ಹೀಗಾಗಿ ಪಿ.ಬಿ.ರಸ್ತೆಯ ಗುಡಿಸಲು ವಾಸಿಗಳಿಗೆ ತಾತ್ಕಾಲಿಕವಾಗಿ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಆಸರೆ ನೀಡಿದೆ.
ಇತ್ತ ರಾತ್ರಿ ಬಿದ್ದ ಮಳೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಬಸ್ ನಿಲ್ದಾಣ ನೆಲಸಮವಾಗಿದ್ದು, ಶೀಟ್‍ಗಳೆಲ್ಲ ಹಾರಿಹೋಗಿ ಅವಾಂತರ ಸೃಷ್ಟಿಯಾಗಿದೆ. ದಾವಣಗೆರೆಯ ತಾತ್ಕಾಲಿಕ ಖಾಸಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸ್ಮಾರ್ಟ್ ಸಿಟಿಯಿಂದ ನೂತನ ಬಸ್ ನಿಲ್ದಾಣ ನಿರ್ಮಾಣದ ಹಿನ್ನೆಲೆಯಲ್ಲಿ ಹೈಸ್ಕೂಲ್ ಮೈದಾನಕ್ಕೆ ಖಾಸಗಿ ಬಸ್ ಶಿಪ್ಟ್ ಆಗಿದ್ದವು. ಆದರೆ ನಿಲ್ದಾಣದ ಶೀಟ್ ಹಾರಿಹೋಗಿ ಅಂಗಡಿಗಳೆಲ್ಲ ನೀರು ಪಾಲಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ಸಾಮಗ್ರಿಗಳು, ಮೊಬೈಲ್, ಕಂಪ್ಯೂಟರ್ ನಷ್ಟವಾಗಿದೆ.
ಇತ್ತ ಏಕಾಏಕಿ ಸುರಿದ ಮಳೆಗೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದಲ್ಲಿ ಜನರು ಕೂಡ ತತ್ತರಿಸಿದ್ದು, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಏಕಾಏಕಿ ಮಳೆನೀರು ಮನೆಗೆ ನುಗ್ಗಿದ ಪರಿಣಾಯ ಮನೆಯಿಂದ ಹೊರ ಬರಲಾರದ ಸ್ಥಿತಿಯಲ್ಲಿದ್ದ ವೃದ್ಧನೊಬ್ಬ ಪರದಾಡುತ್ತಿದ್ದನು. ತಕ್ಷಣ ಮನೆಯಲ್ಲಿ ಸಿಲುಕಿದ್ದ ವೃದ್ಧನನ್ನು ಗ್ರಾಮದ ಯುವಕ ಕಾಪಾಡಿದ್ದಾರೆ.
ವೃದ್ಧನ ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ನೀರು ಪಾಲಾಗಿದೆ. ಒಂದು ಕಡೆ ಲಾಕ್‍ಡೌನ್ ಎಫೆಕ್ಟ್ ಇನ್ನೊಂದು ಕಡೆ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿರುವುದಕ್ಕೆ ಗ್ರಾಮದ ಜನರು ಪರದಾಡುತ್ತಿದ್ದಾರೆ. ನೀಲಗುಂದ ಗ್ರಾಮ ಒಂದು ರೀತಿ ದ್ವೀಪದಂತಾಗಿದೆ.