ಚಾಮರಾಜನಗರ: ಕೊರೊನಾ ಭೀತಿಯಿಂದ ಬೆಳೆ ನಷ್ಟ ಅನುಭವಿಸುತ್ತಿದ್ದ ರೈತರ ನೋವಿಗೆ ಸಂಸದ ಡಿ.ಕೆ.ಸುರೇಶ್ ಸ್ಪಂದಿಸಿದ್ದು, ಕಲ್ಲಂಗಡಿ, ಟೊಮಟೊ, ಬದನೆಕಾಯಿ ನಷ್ಟವಾಗುತ್ತಿದ್ದುದನ್ನು ಮನಗಂಡು ಸ್ವತಃ ತಾವೇ ಖರೀದಿ ಮಾಡಲು ಮುಂದಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ. ವ್ಯಾಪ್ತಿಯ ನಲ್ಲೂರು, ಗದ್ದೆ ಪೋಡಿ ಗ್ರಾಮಗಳಿಗೆ ಭೇಟಿ ನೀಡಿದ್ದು, ಈ ವೇಳೆ ಬೆಳೆ ನಷ್ಟವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸುಮಾರು 18 ಎಕರೆಯಲ್ಲಿ ಬೆಳೆದ ಕಲ್ಲಂಗಡಿಯನ್ನು ಸುರೇಶ್ ಕೊಂಡುಕೊಂಡಿದ್ದಾರೆ. ಕಲ್ಲಂಗಡಿ ಜೊತೆಗೆ ಟೊಮಟೊ, ಬದನೆಕಾಯಿ ಕೊಂಡು ಸ್ಥಳೀಯ ಜನರಿಗೆ ವಿತರಣೆ ಮಾಡುವಂತೆ ಮುಖಂಡರಿಗೆ ಸೂಚಿಸಿದ್ದಾರೆ.
ಈ ಕುರಿತು ಚಾಮರಾಜನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದು, ತರಕಾರಿ, ಹಣ್ಣು, ಹೂವು ಯಾರೂ ಕಾಪಾಡಿಕೊಳ್ಳಲು ಆಗುವುದಿಲ್ಲ. ಹೂವುಗಳು ಮೂರೇ ದಿನಕ್ಕೆ ಒಣಗಿ ಹೋಗುತ್ತವೆ. ಮಾರುಕಟ್ಟೆ ಕೂಡ ಉತ್ತೇಜನಕಾರಿಯಾಗಿಲ್ಲ. ಕೊರೊನಾ ಎಪೆಕ್ಟ್ ನೇರವಾಗಿ ರೈತರ ಮೇಲೆ ಆಗಿದೆ. ಅದರಲ್ಲೂ ತೋಟಗಾರಿಕೆ ಬೆಳೆ ಮೇಲೆ ಹೆಚ್ಚು ಬಿದ್ದಿದೆ. ಇದರಿಂದಾಗಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು