ಬೆಳಗಾವಿ : ಕೊರೊನಾ ಶಂಕಿತರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರಲ್ಲಿ ಇಬ್ಬರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿರುವುದಿಲ್ಲ. ಒಂದು ನೆಗೆಟಿವ್ ಬಂದಿರುತ್ತದೆ. ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ 3 ಮಾದರಿಗಳ ವರದಿ ನಿರೀಕ್ಷಿಸಲಾಗಿದೆ. ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಅಂತರ್ ಜಿಲ್ಲಾ ಗಡಿಯಲ್ಲೂ ತಪಾಸಣೆ: ಬೆಳಗಾವಿ ಜಿಲ್ಲೆಯ ನೆರೆಹೊರೆಯ ಗಡಿಯಲ್ಲಿ ಕೂಡ ಆರೋಗ್ಯ ಇಲಾಖೆಯ ತಂಡಗಳನ್ನು ನಿಯೋಜಿಸಿ ಎಲ್ಲ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ. ನೆರೆಯ ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗಡಿಯಲ್ಲಿ ಪ್ರವೇಶಿಸುವ ಸಣ್ಣ ಪ್ರಯಾಣಿಕರ ವಾಹನಗಳಲ್ಲಿರುವ ಜನರ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.