ಚಿಕ್ಕಮಗಳೂರು: ಕೊರೊನಾ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರ ಮನೆಯಲ್ಲೇ ಇರುವ ಬಡವರಿಗೆ ಕೊಡುತ್ತಿರುವ ಉಚಿತ ಅಕ್ಕಿಯಲ್ಲೂ ಸೊಸೈಟಿಯವರು ಗೋಲ್‍ಮಾಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಆರೋಪಕ್ಕೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್, ನಿಡುವಾಳೆ, ಕೂವೆ ಗ್ರಾಮಗಳ ಸೊಸೈಟಿಯಲ್ಲಿ ಅಕ್ರಮ ನಡೆಯುತ್ತಿದ್ದು, ನಿಗದಿಗಿಂತ ಕಡಿಮೆ ಪಡಿತರ ನೀಡುತ್ತಿದ್ದಾರೆ. ಜೊತೆಗೆ ಎಲ್ಲರಿಂದಲೂ 30-50 ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ಹಮಾಲಿ ಕೂಲಿ, ಸಾಗಾಣಿಕ ವೆಚ್ಚ, ಲ್ಯಾಪ್‍ಟಾಪ್ ಚಾರ್ಜ್, ಅಕ್ಕಿ ತೂಗಿ ಹಾಕುವವನಿಗೆ ಹಾಗೂ ಗೋಣಿಚೀಲದ ಕರ್ಚನ್ನು ಬಡವರ ಮೇಲೆ ಹಾಕುತ್ತಿದ್ದಾರೆ. ಅತಿ ಬಡವರ ಅಂತ್ಯೋದಯ ಕಾರ್ಡ್‍ನಲ್ಲೂ ಅಕ್ರಮ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಕೊಡುವ ಅಕ್ಕಿಯಲ್ಲೂ ಕಡಿಮೆ ಕೊಡುತ್ತಿದ್ದಾರೆ. ಪ್ರಶ್ನಿಸಿದರೆ ನಿಮಗೆ ಬರುವುದು ಅಷ್ಟೆ ಎಂದು ಹೇಳುತ್ತಿದ್ದರಂತೆ.
ಸೀಮೆಎಣ್ಣೆ ಕೂಡ ಹಂಚಿಕೆ ಮಾಡಲಾಗಿದೆ. ಆದರೆ ಸೊಸೈಟಿಯವರು ಸೀಮೆ ಎಣ್ಣೆ ಇಲ್ಲ ಅಂತಾರೆ. ಲೀಟರ್ ಸೀಮೆಎಣ್ಣೆಗೆ 35 ರೂಪಾಯಿ. ಆದರೆ ಇವರು 50 ರೂಪಾಯಿವರೆಗೂ ಪಡೆದುಕೊಳ್ಳುತ್ತಾರೆ ಎಂದು ಸ್ಥಳೀಯರು ಸೊಸೈಟಿಯವರ ವಿರುದ್ಧ ಕಿಡಿಕಾರಿದ್ದಾರೆ. ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಸಚಿವ ಸಿ.ಟಿ ರವಿಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಸಿ.ಟಿ.ರವಿ ಸೂಚಿಸಿದ್ದಾರೆ.