ರಾಮನಗರ: ಮದ್ಯ ಸಿಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯೋರ್ವ ಊಟ ತ್ಯಜಿಸಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಚನ್ನಪಟ್ಟಣ ತಾಲೂಕಿನ ಗುಡಿಸರಗೂರು ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಗುಡಿಸರಗೂರು ಗ್ರಾಮದ ನಿವಾಸಿ ಗುಂಡೇಗೌಡ (32) ಮೃತ ವ್ಯಕ್ತಿ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಹೀಗಾಗಿ ಮದ್ಯ ಪ್ರಿಯರಿಗೆ ಎಣ್ಣೆ ಸಿಗದಂತಾಗಿದೆ. ಗುಂಡೇಗೌಡ ಮದ್ಯದಂಗಡಿ ಮುಚ್ಚಿದಾಗಿನಿಂದ ಎಣ್ಣೆಗಾಗಿ ಹುಡುಕಾಡ ನಡೆಸಿದ್ದ. ಆದರೆ ಮದ್ಯ ಸಿಗದೆ ಇದ್ದ ಕಾರಣ ಊಟ ಬಿಟ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕಳೆದ ನಾಲ್ಕು ದಿನಗಳಿಂದ ಊಟವನ್ನೂ ಸೇವಿಸದೇ ಅಸ್ವಸ್ಥನಾಗಿ ಸಾವನ್ನಪ್ಪಿದ್ದಾನೆ.
ಮೃತ ಗುಂಡೇಗೌಡ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ನಿತ್ಯವೂ ಎಳನೀರಿಗೆ ಮದ್ಯ ಮಿಕ್ಸ್ ಮಾಡಿಕೊಂಡು ಸೇವನೆ ಮಾಡುತ್ತಿದ್ದ. ಆದರೆ ಕೊರೊನಾ ಭೀತಿಯಿಂದ ಬಾರ್ ಗಳಿಗೂ ಬೀಗ ಬಿದ್ದಿದ್ದು ಎಣ್ಣೆಗಾಗಿ ಹುಡುಕಾಟ ನಡೆಸಿದ್ದರೂ ಸಿಕ್ಕಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಪಟ್ಟು ಸಾವನ್ನಪ್ಪಿದ್ದಾನೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.