Breaking News
Home / ಜಿಲ್ಲೆ / ಬುದ್ದಿ ಕಲಿಯದ ಜನರೇ ಎಚ್ಚರ ಎಚ್ಚರ, ಮನೆಯಿಂದ ಹೊರಗೆ ಬಂದ್ರೆ ಸಾಯ್ತಿರಾ..!

ಬುದ್ದಿ ಕಲಿಯದ ಜನರೇ ಎಚ್ಚರ ಎಚ್ಚರ, ಮನೆಯಿಂದ ಹೊರಗೆ ಬಂದ್ರೆ ಸಾಯ್ತಿರಾ..!

Spread the love

ಬೆಂಗಳೂರು,ಏ.17- ನಮ್ ಜನಕ್ಕೆ ಅದೇನಾಗಿದೆಯೋ ಏನೋ… ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸೋಂಕಿತರು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾವನ್ನಪ್ಪುವವರ ಪ್ರಮಾಣವೂ ಹೆಚ್ಚಾಗುತ್ತಿದೆ. ಹೀಗಿದ್ದರೂ ಜನರ ಅನಗತ್ಯ ಓಡಾಟ ನಿಂತಿಲ್ಲ.

ಹೀಗಿದ್ದರೂ ಲಾಕ್‍ಡೌನ್ ನಿಯಮಗಳನ್ನು ಪಾಲಿಸದೆ ಮನದಂತೆ ಓಡಾಡುತ್ತಿರುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬ ಆತಂಕ ಎದುರಾಗಿದೆ. ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾ.24ರಂದು 21 ದಿನಗಳ ಕಾಲ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿ ಯಾರೂ ಮನೆಯಿಂದ ಹೊರ ಬರಬಾರದು ಎಂದು ಸೂಚಿಸಿದ್ದರು.

ಆದರೂ ಜನ ಹಣ್ಣ, ತರಕಾರಿ, ದಿನಸಿ ಕೊಳ್ಳಲು, ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ನೀಡುವ ಉಚಿತ ಪದಾರ್ಥಗಳನ್ನು ಪಡೆಯಲು ಮುಗಿ ಬಿದ್ದರು. ಲಾಕ್‍ಡೌನ್ ನಿಯಮಗಳನ್ನು ಗಾಳಿಗೆ ತೂರಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲಿ ಇರುವುದು ಒಂದೇ ಈ ರೋಗಕ್ಕೆ ಮದ್ದು ಎಂದು ಸಾವಿರಾರು ಬಾರಿ ಹೇಳಿದರೂ ಬುದ್ದಿ ಕಲಿಯದ ಕೆಲವರು ತಮಗೂ ಈ ನಿಯಮಗಳು ಸಂಪರ್ಕ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚಾದ ಹಲವೆಡೆ ಸೀಲ್‍ಡೌನ್ ಮಾಡಲಾಯಿತು. ಅಲ್ಲೂ ಕೂಡ ಬಹುತೇಕ ಜನರು ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ರಸ್ತೆಯಲ್ಲಿ ಓಡಾಡುತ್ತಾ, ತಮಗೆ ಬೇಕಾದನ್ನು ಪಡೆಯಲು ಎಲ್ಲಿಗೆ ಬೇಕೋ ಅಲ್ಲಿಗೆ ತಿರುಗಾಡುತ್ತಿದ್ದಾರೆ.
ಈ ಸಾಂಕ್ರಾಮಿಕ ಕೊರೊನಾ ಇಂತಹವರಿಗೆ ಅಂಟುವ ಜತೆಗೆ ಸಮಾಜಕ್ಕೂ ಹರಡುವ ಅಪಾಯವಿದೆ.

ಸರ್ಕಾರ ರಸ್ತೆಗಳಲ್ಲಿ ಓಡಾಡದಂತೆ ಸಾವಿರಾರು ರಸ್ತೆಗಳಿಗೆ ಬ್ಯಾರಿಕೇಡ್‍ಗಳನ್ನು ಹಾಕಿದರೂ ಕೆಲವರು ಅವುಗಳನ್ನು ತೆರವು ಮಾಡಿ ತಮ್ಮ ವಾಹನಗಳನ್ನು ತೆಗೆದುಕೊಂಡು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಇಂತಹ ವರ್ತನೆಗಳಿಂದ ರೋಗ ನಿಯಂತ್ರಣಕ್ಕೆ ಬರುತ್ತದೆಯೇ ಎಂಬ ಅನುಮಾನ ಕಾಡತೊಡಗಿದೆ.

ದಿನೇ ದಿನೇ ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವುದನ್ನು ಕಂಡು ಪ್ರಧಾನಿ ಮತ್ತೆ ಮೇ 3ರವರಗೆ ಲಾಕ್‍ಡೌನ್ ವಿಸ್ತರಿಸಿ ನಿಯಮಗಳನ್ನು ಕಠಿಣಗೊಳಿಸುವುದಾಗಿ ಹೇಳಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ. ಹೀಗಿದ್ದಾಗ್ಯೂ ಕೂಡ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ದಾವಣಗೆರೆ, ರಾಯಚೂರು ಮುಂತಾದೆಡೆ ಜನ ಎಪಿಎಂಸಿ ಮಾರುಕಟ್ಟೆ ಇತರೆಡೆ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಅಲ್ಲದೆ, ರಸ್ತೆಗಳಲ್ಲಿ ಓಡಾಟ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವವರನ್ನು ಹಿಡಿದು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಈಗಾಗಲೇ 60 ಸಾವಿರಕ್ಕೂ ವಾಹನಗಳನ್ನು ಜಫ್ತಿ ಮಾಡಿ 4,500 ಜನರನ್ನು ಜೈಲಿಗೆ ಕಳುಹಿಸಲಾಗಿದೆ. 2187 ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಇಷ್ಟೆಲ್ಲ ಕಠಿಣ ನಿಯಮಗಳನ್ನು ಮಾಡಿದರೂ ಕೂಡ ಜನ ಹೊರಬರುವುದು ತಪ್ಪುತ್ತಿಲ್ಲ. ಟಿವಿ ಮಾಧ್ಯಮಗಳು, ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ಕೂಡ ಅನಗತ್ಯ ಓಡಾಟ ತಪ್ಪುತ್ತಿಲ್ಲ. ಅಗತ್ಯ ವಸ್ತುಗಳ ಸರಬರಾಜು, ಔಷಧಿ, ಆ್ಯಂಬುಲೆನ್ಸ್, ಮಾಧ್ಯಮಗಳು ಅವಕಾಶ ನೀಡಲಾಗಿದೆ. ಇವುಗಳ ನೆಪದಲ್ಲಿ ಸಾಕಷ್ಟು ಜನ ಓಡಾಡುತ್ತಲೇ ಇದ್ದಾರೆ.

ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಮಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ನಡುವೆಯೂ ಜನರ ಓಡಾಟ ತಪ್ಪಿಲ್ಲ. ಮಾರುಕಟ್ಟೆ, ಔಷಧಿ ಅಂಗಡಿ, ಆಸ್ಪತ್ರೆಗಳನ್ನು ನೆಪವಾಗಿಟ್ಟುಕೊಂಡು ಹೊರ ಬರುತ್ತಲೇ ಇದ್ದಾರೆ. ಇದರಿಂದ ಮಹಾಮಾರಿ ಕೊರೊನಾ ದಿನದಿಂದನಕ್ಕೆ ಉಲ್ಬಣಿಸುತ್ತಲೇ ಇದೆ.

ಈ ರೋಗ ಮೂರನೇ ಹಂತ ತಲುಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆ ಹಂತ ತಲುಪದಂತೆ ನಿಯಂತ್ರಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಬಡವರು, ನಿರ್ಗತಿಕರು, ಕಾರ್ಮಿಕರಿಗೆ ಊಟ, ವಸತಿ ಕಲ್ಪಿಸಿದೆ. ಬಿಪಿಎಲ್ ಕಾರ್ಡುದಾರರಿಗೆ ರೇಷನ್ ವಿತರಿಸಿದೆ. ಪ್ರತಿ ದಿನ 8 ಲಕ್ಷ ಲೀಟರ್ ಹಾಲನ್ನು ಉಚಿತವಾಗಿ ನೀಡಲಾಗುತ್ತಿದೆ.

ಪ್ರತಿ ವಾರ್ಡ್, ಕ್ಷೇತ್ರ ಮಟ್ಟದಲ್ಲಿ ಜನಪ್ರತಿನಿಧಿಗಳು ಆಯಾ ಕ್ಷೇತ್ರದ ಮತದಾರರಿಗೆ ರೇಷನ್, ಊಟದ ವ್ಯವಸ್ಥೆಯನ್ನು ತಮ್ಮ ಕೈಲಾದ ಮಟ್ಟಿಗೆ ಮಾಡುತ್ತಿದ್ದಾರೆ. ಈ ನಡುವೆ ಸರ್ಕಾರ ಕೂಡ ಕಾರ್ಮಿಕರಿಗೆ ರೇಷನ್ ಕಿಟ್‍ಗಳನ್ನು ನೀಡುತ್ತಿದೆ.

ಬಡ ಮಹಿಳೆಯರಿಗೆ ಜನಧನ್ ಖಾತೆ 500 ಹಣ ಹಾಕಲಾಗಿದೆ. ಕಾರ್ಮಿಕರ ಖಾತೆಗೆ 2000 ರೂ. ಹಾಕಲಾಗಿದೆ. ಈ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಹಲವೆಡೆ. ಈ ಎಲ್ಲದರ ನಡುವೆ ಜನರು ಇನ್ನೆರಡು ವಾರಗಳ ಕಾಲ ಮನೆಯಲ್ಲೇ ಇರುವಂತೆ ಮೇಲಿಂದ ಮೇಲೆ ಮನವಿ ಮಾಡಲಾಗುತ್ತಿದೆ. ಆದರೆ, ಕೆಲವರ ಅನಗತ್ಯ ಓಡಾಟದಿಂದ ಅಪಾಯದ ಪರಿಸ್ಥಿತಿ ತಲುಪಬಹುದೆಂಬ ಆತಂಕ ಶುರುವಾಗಿದೆ.

ಪೆÇಲೀಸರು ಅನಗತ್ಯವಾಗಿ ಓಡಾಡುವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ, ಅನಗತ್ಯ ಓಡಾಟ ನಿಲ್ಲಿಸದಿದ್ದರೆ ರೋಗ ನಿಯಂತ್ರಣಕ್ಕೆ ದಂಡಂ ದಶಗುಣಂ ಮಾರ್ಗ ಅನುಸರಿಸಬೇಕಾಗುತ್ತದೆ.


Spread the love

About Laxminews 24x7

Check Also

ಮಿ.ಕುಮಾರಸ್ವಾಮಿ ನೀನು ಚುನಾವಣೆಯಲ್ಲಿ ಗೆಲ್ಲಲ್ಲ : ಏಕವಚನದಲ್ಲೇ ಡಿಸಿಎಂ ಡಿಕೆಶಿ ವಾಗ್ಧಾಳಿ

Spread the love ಬೆಂಗಳೂರು : ಮಹಿಳೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಚುನಾವಣೆ ಹೊತ್ತಲ್ಲಿ ವಿರೋಧ ಪಕ್ಷಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ