ಬೆಂಗಳೂರು: ಕೊರೊನಾ ಪೀಡಿತ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 11ನೇ ಸ್ಥಾನ ಸಿಕ್ಕಿರಬಹುದು. ಆದರೆ ಲಾಕ್‍ಡೌನ್ ಮಧ್ಯೆ ಕೊರೊನಾ ಪೀಡಿತರ ಸಂಖ್ಯೆ ದಿಢೀರ್ ಏರಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದಿದ್ದು ಮಾರ್ಚ್ 8 ರಂದು. ಖಾಸಗಿ ಕಂಪನಿಯ ಟೆಕ್ಕಿಗೆ ಕೊರೊನಾ ಬಂದಿತ್ತು. ಇದಾದ 17 ದಿನದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50ಕ್ಕೆ ಏರಿಕೆ ಆಗಿತ್ತು.
ಮಾರ್ಚ್ 31ಕ್ಕೆ 100ನೇ ಪ್ರಕರಣ ಬಂದಿತ್ತು. ಅಂದರೆ ಮಾರ್ಚ್ 25 ರಿಂದ 31ರವರೆಗಿನ 6 ದಿನದಲ್ಲಿ 50 ಮಂದಿಗೆ ಪಾಸಿಟಿವ್ ಬಂದಿತ್ತು. ಇದಾದ ನಂತರ ಏಪ್ರಿಲ್ 5ಕ್ಕೆ 150 ಮಂದಿಗೆ ಕೊರೊನಾ ಬಂದಿದ್ದರೆ ಕಳೆದ ನಾಲ್ಕು ದಿನದಲ್ಲೇ 47 ಮಂದಿಗೆ ಸೋಂಕು ತಗಲಿದ್ದು ಕೊರೊನಾ ನಿಯಂತ್ರಣ ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ.
ಮಾರ್ಚ್ 21ರಿಂದ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದೆ. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರ ಕ್ವಾರಂಟೈನ್ ಅವಧಿಯೂ ಪೂರ್ಣವಾಗಿದೆ. ಆದರೆ ನಂಜನಗೂಡು ಫಾರ್ಮಾ ಕಂಪನಿ ಮತ್ತು ದೆಹಲಿಯ ಜಮಾತ್‍ಗೆ ತೆರಳಿದವರು ಮತ್ತು ಅವರ ಸಂಪರ್ಕಕ್ಕೆ ಬಂದವರಿಂದ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ 197 ಮಂದಿಗೆ ಕೊರೊನಾ ಬಂದಿದ್ದು, 6 ಮಂದಿ ಮೃತ ಪಟ್ಟಿದ್ದಾರೆ. 30 ಮಂದಿ ಡಿಸ್ಚಾರ್ಜ್ ಆಗಿದ್ದು, 161 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಪೈಕಿ ಒಬ್ಬರನ್ನು ಐಸಿಯುನಲ್ಲಿ, ಒಬ್ಬರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ.
ಅತಿ ಹೆಚ್ಚು ಕೊರೊನಾ ಎಲ್ಲಿ?
ಬೆಂಗಳೂರು ನಗರ 58, ಮೈಸೂರು 37, ದಕ್ಷಿಣ ಕನ್ನಡ 12 ಮಂದಿಗೆ ಕೊರೊನಾ ಬಂದಿದೆ. ಬೀದರ್ ಮತ್ತು ಬೆಳಗಾವಿಯಲ್ಲಿ ತಲಾ 10, ಬಾಗಲಕೋಟೆ 8, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕಲಬುರ್ಗಿಯಲ್ಲಿ ತಲಾ 9 ಮಂದಿ, ಬಳ್ಳಾರಿಯಲ್ಲಿ 6, ಮಂಡ್ಯ 5 ಮಂದಿಗೆ ಪಾಸಿಟಿವ್ ಬಂದಿದೆ.
ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಉಡುಪಿಯಲ್ಲಿ ತಲಾ 3, ಧಾರವಾಡ 2, ಕೊಡಗು, ತುಮಕೂರು, ಗದಗದಲ್ಲಿ ಒಂದೊಂದು ಪ್ರಕರಣ ಬಂದಿದೆ.
ಮೃತಪಟ್ಟವರು:
ಕಲಬರುಗಿಯ ಹಿರಿಯ ವ್ಯಕ್ತಿ(ರೋಗಿ 6), ಚಿಕ್ಕಬಳ್ಳಾಪುರದ ಮಹಿಳೆ(ರೋಗಿ 53), ತುಮಕೂರಿನ ಹಿರಿಯ ವ್ಯಕ್ತಿ(ರೋಗಿ 125) ಮೃತಪಟ್ಟಿದ್ದರು. ನಿನ್ನೆ ಬಾಗಲಕೋಟೆಯ 75 ವರ್ಷದ ವ್ಯಕ್ತಿ(ರೋಗಿ 166), ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ(ರೋಗಿ 177) ಇಂದು ಸಾವನ್ನಪ್ಪಿದ್ದಾರೆ.
ಬಿಡುಗಡೆಯಾದವರು:
ಆರಂಭದಲ್ಲಿ ಕೊರೊನಾ ಬಂದವರ ಪೈಕಿ ಹಲವು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೋಗಿ ಸಂಖ್ಯೆಗಳಾದ 1, 2, 3, 4, 5, 7, 8, 9, 10, 11, 12, 13, 14, 15, 20, 21, 23, 24, 26, 28, 29, 31, 34 -ಕೆ, 35, 36, 39-ಕೆ, 41-ಕೆ, 42, 63, 75 ಡಿಸ್ಚಾರ್ಜ್ ಆಗಿದ್ದಾರೆ.
ಯಾವ ದಿನ ಎಷ್ಟು ಪ್ರಕರಣ?
ಮಾ.8 – 1
ಮಾ.25 – 50
ಮಾ.31 – 100
ಏ.5 – 150
ಏ.9 – 197
ಎಷ್ಟು ದಿನದಲ್ಲಿ ಎಷ್ಟು ಏರಿಕೆ?
1-50 — 17 ದಿನ
1-100 — 6 ದಿನ
100-150 — 5 ದಿನ
150-197 — 4 ದಿನ