ನವದೆಹಲಿ, ಮಾ.10- ದೇಶದಲ್ಲಿ ಮತ್ತೆ ಏಳು ಹೊಸ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಇದುವರೆಗೆ ದೃಢಪಟ್ಟವರ ಸಂಖ್ಯೆ 48ಕ್ಕೇರಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ.ದುಬೈನಿಂದ ಮಹಾರಾಷ್ಟ್ರದ ಪುಣೆ ಜಿಲ್ಲೆಗೆ ಆಗಮಿಸಿದ ದಂಪತಿಯಲ್ಲಿ ವೈರಾಣು ಸೋಂಕು ಇರುವುದು ದೃಢಪಟ್ಟಿದೆ.
ನಿನ್ನೆ ಹೊಸ ಕೊರೊನಾ ವೈರಸ್ ಪ್ರಕರಣಗಳು ದೆಹಲಿ, ಉತ್ತರ ಪ್ರದೇಶ, ಕೇರಳದ ಎರ್ನಾಕುಲಂ, ಜಮ್ಮು, ಬೆಂಗಳೂರು, ಪಂಜಾಬ್ ಮತ್ತು ಪುಣೆಗಳಲ್ಲಿ ವರದಿಯಾಗಿದೆ. ಆದರೆ, ದೇಶದಲ್ಲಿ ಇದುವರೆಗೆ ಕೊರೊನಾ ವೈರಸ್ ದಾಳಿಯಿಂದ ಮೃತಪಟ್ಟ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕಳೆದ ಭಾನುವಾರ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ಮೃತಪಟ್ಟ ವ್ಯಕ್ತಿಗೆ ಕೊರೊನಾ ವೈರಸ್ ಇರಲಿಲ್ಲ ಎಂದು ಕೂಡ ಸಚಿವಾಲಯ ಸ್ಪಷ್ಟನೆ ನೀಡಿದೆ.
ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ವೈರಸ್ ಸೋಂಕು ಜಾಗತಿಕ ಮಟ್ಟದ ಸಾಂಕ್ರಾಮಿಕವಾಗಿದೆ ಎಂದು ಎಚ್ಚರಿಕೆ ನೀಡಿದ್ದು, ಆದರೆ, ವೈರಸ್‍ಅನ್ನು ನಿಯಂತ್ರಿಸಬಹುದಾಗಿದೆ ಎಂದು ಹೇಳಿದೆ.