ಚಿಕ್ಕೋಡಿ/ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ.
ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನ ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ ಭೀತಿ ನಡುವೆಯೂ ಉಚಿತ ಕೋಳಿ ತೆಗೆದುಕೊಂಡು ಹೋಗಲು ಜನ ಮುಗಿ ಬಿದ್ದಿದ್ದರು
ಒಬ್ಬರು ಎರಡು ಮೂರು ಕೋಳಿಗಳನ್ನ ಪಡೆದುಕೊಂಡು ಹೋಗಿದ್ದಾರೆ. ಇತ್ತ ಚಿಕನ್ ತಿಂದರೆ ಕೊರೊನಾ ಹರಡುತ್ತೆ ಎನ್ನುವ ಭೀತಿಯಲ್ಲಿದ್ದವರು ಉಚಿತ ಕೋಳಿಗಳನ್ನ ನೀಡುವುದನ್ನ ನೋಡುತ್ತಾ ನಿಂತುಕೊಂಡಿದ್ದರು. ಚಿಕನ್ ತಿಂದರೆ ಕೊರೊನಾ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ ಇಡಿ ಕುಕ್ಕುಟ ಉದ್ಯಮ ನೆಲೆಕಚ್ಚಿದೆ. ಹೀಗಾಗಿ ಈ ಉದ್ಯಮವನ್ನ ನಂಬಿದವರಿಗೆ ತುಂಬಾ ನಷ್ಟವಾಗಿದೆ.