Breaking News
Home / ಜಿಲ್ಲೆ / ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಭಾನುವಾರ ಶಾಸಕಾಂಗ ಸಭೆ ಕರೆದಿದೆ: bsy

ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಭಾನುವಾರ ಶಾಸಕಾಂಗ ಸಭೆ ಕರೆದಿದೆ: bsy

Spread the love

ಬೆಂಗಳೂರು,ಫೆ.13- ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಬಿಜೆಪಿ ಭಾನುವಾರ ಶಾಸಕಾಂಗ ಸಭೆ ಕರೆದಿದೆ. ಮಲ್ಲೇಶ್ವರಂನ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಶಾಸಕಾಂಗ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಹಿಸಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಗಿದೆ.

ಕೆಲವು ಶಾಸಕರು ಕೈಕೊಡಬಹುದೆಂಬ ಭೀತಿಯೂ ಒಳಗೊಳಗೆ ಕಾಡುತ್ತಿದೆ. ಹೀಗಾಗಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಶಾಸಕಾಂಗ ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನ ವಂಚಿತರು ಮುನಿಸಿಕೊಂಡಿದ್ದು, ಸರ್ಕಾರದ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್‍ನಿಂದ ವಲಸೆ ಬಂದವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುತ್ತಿರುವುದು ಮೂಲ ಬಿಜೆಪಿಯವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ನೊಂದವರಿಗೆ ಮಣೆ ಹಾಕುತ್ತಿರುವುದಕ್ಕೆ ಅನೇಕರು ಒಳಗೊಳಗೆ ಕುದಿಯುತ್ತಿದ್ದಾರೆ. ಇತ್ತ ಪಕ್ಷದ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಎರಡು ದಿನಗಳ ಹಿಂದೆಯಷ್ಟೇ ಶಾಸಕಾಂಗ ಸಭೆ ಕರೆಯಬೇಕೆಂದು ಒತ್ತಾಯ ಮಾಡಿದ್ದರು. ಸೋಮವಾರದಿಂದ ಆರಂಭವಾಗಲಿರುವ ಜಂಟಿ ಅಧಿವೇಶನದ ವೇಳೆ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಕಾಂಗ್ರೆಸ್-ಜೆಡಿಎಸ್ ಸದನದಲ್ಲಿ ತರಾಟೆಗೆ ತೆಗೆದುಕೊಳ್ಳಲು ತುದಿಗಾಲಲ್ಲಿ ನಿಂತಿವೆ.

ಕಳೆದ ವರ್ಷ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಉಂಟಾದ ನೆರೆ ಹಾವಳಿಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಂತ್ರಸ್ತರಿಗೆ ಮನೆ ನಿರ್ಮಿಸದಿರುವುದು, ಕೊಟ್ಟಿರುವ ಪರಿಹಾರದ ಚೆಕ್‍ಗಳು ಬೌನ್ಸ್ ಆಗುತ್ತಿರುವುದು, ಹಿಂದಿನ ಸರ್ಕಾರದ ಅವಧಿಯಲ್ಲಿನ ಅನುದಾನ ಹಿಂಪಡೆಯುತ್ತಿರುವುದು, ಅಭಿವೃದ್ಧಿ ಕಾರ್ಯಗಳ ಕುಂಠಿತ ಸೇರಿದಂತೆ ನಾಡಿನ ಪ್ರಚಲಿತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಪ್ರತಿಪಕ್ಷಗಳು ಹವಣಿಸುತ್ತಿವೆ.

ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಉಂಟಾದ ಗೋಲಿಬಾರ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ. ಪ್ರತಿಪಕ್ಷಗಳ ಸದಸ್ಯರು ಎತ್ತುವ ಪ್ರತಿಯೊಂದು ವಿಷಯಕ್ಕೂ ಸದನದಲ್ಲೇ ಉತ್ತರ ನೀಡುವ ಮೂಲಕ ಸರ್ಕಾರವನ್ನು ಬಲವಾಗಿ ಸಮರ್ಥಿಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರಿಗೆ ಸೂಚನೆ ಕೊಡುವರು.

ಸದನದಲ್ಲಿ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಅದರಲ್ಲೂ ಸಚಿವರು, ಸದಸ್ಯರು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವುದು, ಕಲಾಪದ ವೇಳೆ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡುವುದು ಸೇರಿದಂತೆ ಪ್ರತಿಪಕ್ಷಗಳನ್ನು ಎದುರಿಸಲು ಶಾಸಕರು ಸಜ್ಜಾಗುವಂತೆ ಸಲಹೆ ಮಾಡಿದ್ದಾರೆ.

ಪ್ರತಿಷ್ಠೆಯ ಕಣ: ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕರು ಮುನಿಸಿಕೊಂಡಿರುವ ನಡುವೆ ಸೋಮವಾರವೇ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಚುನಾವಣೆ ನಡೆಯಲಿದೆ.  ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್‍ಕುಮಾರ್ ಎಂಬುವರು ಕಣಕ್ಕಿಳಿದಿದ್ದಾರೆ.  ಪ್ರತಿಷ್ಠೆಯ ಕಣವಾಗಿರುವ ಪರಿಷತ್ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್-ಜೆಡಿಎಸ್ ಬೆಂಬಲದ ನಿರೀಕ್ಷೆಯಲ್ಲಿರುವ ಪಕ್ಷೇತರ ಅಭ್ಯರ್ಥಿ ಅನಿಲ್‍ಕುಮಾರ್ ಕಣಕ್ಕಿಳಿದಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.


Spread the love

About Laxminews 24x7

Check Also

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿ

Spread the love ಬೆಂಗಳೂರು: ನಿರೀಕ್ಷೆಯಂತೆ ಬಿಜೆಪಿ ಮಾಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ