ಕೊರೋನಾ ವೈರಸ್ ಮೂರನೇ ಹಂತ ತಲುಪಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದು ಖಚಿತ. ಹೀಗಾಗಿ, ನಾಳೆಯಿಂದ ಬೆಂಗಳೂರಿನಾದ್ಯಂತ ರಾಸಾಯನಿಕ ಸಿಂಪಡಣೆ ಮಾಡಲಾಗುವುದು.
ಬೆಂಗಳೂರು (ಮಾ. 22): ರಾಜ್ಯದಲ್ಲಿ ಈಗಾಗಲೇ 20 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ದುಬೈನಿಂದ ಇಂದು ಬೆಳಗ್ಗೆ ಆಗಮಿಸಿರುವ ಕನ್ನಡಿಗರ ಪೈಕಿ 6 ಜನರಿಗೆ ಸೋಂಕು ಪತ್ತೆಯಾಗಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಲು ಬಿಬಿಎಂಪಿ ಮುಂದಾಗಿದೆ. ಇಂದು ಜನತಾ ಕರ್ಫ್ಯೂಗೆ ಕರೆ ನೀಡಿರುವಂತೆ ಇನ್ನೂ 10 ದಿನಗಳ ಕಾಲ ಬೆಂಗಳೂರನ್ನು ಸ್ತಬ್ಧಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ನಾಳೆಯಿಂದ ಮತ್ತೆ ಬೆಂಗಳೂರಿನಲ್ಲಿ ಕರ್ಫ್ಯೂ ವಿಧಿಸುವ ಬಗ್ಗೆ ಬಿಬಿಎಂಪಿ ಆಯುಕ್ತರು ಚಿಂತನೆ ನಡೆಸಿದ್ದಾರೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ಸಂಜೆಯೊಳಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಇನ್ನು 10 ದಿನಗಳವರೆಗೂ ಬೆಂಗಳೂರನ್ನು ಸಂಪೂರ್ಣ ಸ್ತಬ್ಧಗೊಳಿಸುವುದು ಸೂಕ್ತ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಈ ಬಗ್ಗೆ ಸರ್ಕಾರಕ್ಕೆ ವಿವರಣೆ ನೀಡಿದ್ದಾರೆ. ಸರ್ಕಾರ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸಾಧ್ಯತೆಗಳಿವೆ.
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಿನನಿತ್ಯದ ವಸ್ತುಗಳನ್ನು ಹೊರತುಪಡಿಸಿ, ಉಳಿದೆಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ಸಲಹೆ ನೀಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ.
ನಾಳೆಯಿಂದ ಬೆಂಗಳೂರಿನಲ್ಲಿ ರಾಸಾಯನಿಕ ಸಿಂಪಡಣೆ:
ಕೊರೋನಾ ವೈರಸ್ ಮೂರನೇ ಹಂತ ತಲುಪಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದು ಖಚಿತ. ಹೀಗಾಗಿ, ನಾಳೆಯಿಂದ ಬೆಂಗಳೂರಿನಾದ್ಯಂತ ರಾಸಾಯನಿಕ ಸಿಂಪಡಣೆ ಮಾಡಲಾಗುವುದು. ಸೋಂಕು ವ್ಯಾಪಿಸದಂತೆ ತಡೆಗಟ್ಟಲು ನಾಳೆ ಬೆಳಗ್ಗೆಯಿಂದಲೇ ಸ್ಪ್ರೇ ಶುರು ಮಾಡಲಾಗುವುದು. ಸೋಂಕಿನ ಪರಿಣಾಮ ತಗ್ಗುವವರೆಗೂ ರಾಸಾಯನಿಕ ಸಿಂಪಡಣೆ ಮಾಡುತ್ತಲೇ ಇರಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.