ಬೆಂಗಳೂರು,ಜ.30-ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದರು ಎಂಬ ಗಾದೆಯಂತೆ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಪಡೆಯುವ ನಿಟ್ಟಿನಲ್ಲಿ ವರಿಷ್ಠರ ಜೊತೆ ಚರ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ತೆರಳಲು ಮುಂದಾಗಿರುವಂತೆ ಸಚಿವ ಸ್ಥಾನ ಕೈ ತಪ್ಪಲಿರುವವರು ಹಾಗೂ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ.
ಪಕ್ಷ ನಿಷ್ಠರನ್ನು ಕಡೆಗಣಿಸಿ ಅಧಿಕಾರದ ಆಸೆಗಾಗಿ ಬಂದವರಿಗೆ ಮಂತ್ರಿ ಸ್ಥಾನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಒಂದು ಬಣದ ವಾದ. ಇನ್ನು ಸಂಪುಟಕ್ಕೆ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿರುವ ಶಾಸಕರು ತಮಗೆ ನಿರ್ಧಿಷ್ಟ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.ಸಮ್ಮಿಶ್ರ ಸರ್ಕಾರ ಪತನವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೆಳಗಾವಿಯ ರಮೇಶ್ ಜಾರಕಿಹೊಳಿ, ನನಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕೆಂದು ಮುಖ್ಯಮಂತ್ರಿ ಮೇಲೆ ಒತ್ತಡದ ತಂತ್ರ ಅನುಸರಿಸಿದ್ದಾರೆ.
ಇತ್ತ ಹಿರೆಕೇರೂರಿನ ಬಿ.ಸಿ.ಪಾಟೀಲ್ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದರೆ, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ವೈದ್ಯಕೀಯ, ಯಶವಂತಪುರದ ಎಸ್.ಟಿ.ಸೋಮಶೇಖರ್ ಬೆಂಗಳೂರು ಅಭಿವೃದ್ದಿ, ಕೆ.ಆರ್.ಪುರಂ ಭೈರತಿ ಬಸವರಾಜ್ ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಇದು ವಲಸಿಗರ ಕಥೆಯಾದರೆ ಮೂಲ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವ ಶಾಸಕರು ಅಸಮಾಧಾನಗೊಂಡು ವರಿಷ್ಠರ ವಿರುದ್ಧ ಒಳಗೊಳಗೆ ಕುದಿಯುತ್ತಿದ್ದಾರೆ.
ಐದರಿಂದ ಆರು ಬಾರಿ , 4ರಿಂದ 5, ಮೂರು , ಎರಡು ಬಾರಿ ಗೆದ್ದಿರುವ ಶಾಸಕರು ತಮಗೆ ಮಂತ್ರಿ ಸ್ಥಾನ ಕೊಡದೆ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿದ್ದು, ಅಧಿಕಾರಕ್ಕಾಗಿ ಬಂದವರಿಗೆ ಮಣೆ ಹಾಕಿದರೆ ನಮ್ಮಂಥ ಪಕ್ಷ ನಿಷ್ಠರ ಕಥೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ.
ಸುಳ್ಯದ ಎಸ್.ಅಂಗಾರ, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಚಿತ್ರದುರ್ಗದ ತಿಪ್ಪಾರೆಡ್ಡಿ, ವಿರಾಜಪೇಟೆಯ ಕೆ.ಜಿ.ಬೋಪಯ್ಯ, ಮಡಿಕೇರಿಯ ಅಪ್ಪಚ್ಚುರಂಜನ್, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಎಸ್.ಎ.ರಾಮದಾಸ್, ಸುರಪುರದ ರಾಜುಗೌಡ ನಾಯಕ್, ದೇವದುರ್ಗದ ಶಿವನಗೌಡ ನಾಯಕ್, ತಿಪಟೂರಿನ ಬಿ.ಸಿ.ನಾಗೇಶ್, ತೀರ್ಥಹಳ್ಳಿಯ ಅರಗ ಜ್ಞಾನೇಂದ್ರ, ಎಂ.ಪಿ.ರೇಣುಕಾಚಾರ್ಯ, ದಾವಣಗೆರೆ ಉತ್ತರದ ಎಸ್.ಎ.ರವೀಂದ್ರನಾಥ್, ಹರಪನಹಳ್ಳಿಯ ಕರುಣಾಕರ ರೆಡ್ಡಿ, ಹೊಳಲ್ಕೆರೆ ಚಂದ್ರಪ್ಪ, ಹೊಸದುರ್ಗದ ಗೂಳಿಹಟ್ಟಿ ಶೇಖರ್, ಸೇರಿದಂತೆ ಮತ್ತಿತರ ಶಾಸಕರು ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ -ಜೆಡಿಎಸ್‍ನಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿರುವುದೇನೋ ನಿಜ. ಹಾಗಂತ ಪಕ್ಷ ನಿಷ್ಠರನ್ನು ಕಡೆಗಣೆಸಿದರೆ ಸಂಘಟನೆ ಮೇಲೆ ಪರಿಣಾಮ ಬೀರುತ್ತದೆ. ಪಕ್ಷದ ನಾಯಕರು ಈ ಬಗ್ಗೆ ಗಮನಹರಿಸಬೇಕೆಂದು ಅನೇಕರು ನೋವು ತೋಡಿಕೊಂಡಿದ್ದಾರೆ.
# ಮುಂದುವರೆದ ಲಾಬಿ:
ಇನ್ನು ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗಿರುವಂತೆ ಸಂಪುಟಕ್ಕೆ ಸೇರ್ಪಡೆಯಾಗುವ ಆಕಾಂಕ್ಷಿಗಳು ತಮ್ಮ ತಮ್ಮ ಗಾಡ್‍ಫಾದರ್‍ಗಳ ಮೂಲಕ ಒತ್ತಡ ಹಾಕುತ್ತಿದ್ದಾರೆ. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ, ಆರ್‍ಎಸ್‍ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿಯಾಗಿ ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.ಇನ್ನೊಂದೆಡೆ ಸುಳ್ಯದ ಎಸ್.ಅಂಗಾರ ಕೂಡ ಸಂಘಪರಿವಾರದ ನಾಯಕರನ್ನು ಭೇಟಿಯಾಗಿ ಈ ಬಾರಿಯಾದರೂ ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕೆಂದು ಕೋರಿದ್ದಾರೆ.
ಇನ್ನು ಕೆಲವು ಶಾಸಕರು ದೆಹಲಿ ನಾಯಕರ ಮೂಲಕವೂ ಒತ್ತಡ ಹಾಕುತ್ತಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಮತ್ತು ಯಡಿಯೂರಪ್ಪನವರ ಕೃಪಾ ಕಟಾಕ್ಷ ಯಾರ ಮೇಲೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.