ಬೆಂಗಳೂರು(ಏ.15): ಲಾಕ್ಡೌನ್ನಿಂದಾಗಿ ಮಂಡ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟ ಸಿಲುಕಿರುವ ಮಂಡ್ಯ ರೈತರಿಗೆ ಇದೀಗ ಪಕ್ಕದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಪತ್ಬಾಂಧವ ಆಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರ ಪರಿಸ್ಥಿತಿ ಕಂಡು ಅನ್ನಾದತರು ಬೆಳೆದ ಬೆಳೆಗಳನ್ನು ತಮ್ಮ ಟ್ರಸ್ಟ್ ವತಿಯಿಂದ ಖರೀದಿಸಿ ಜನರಿಗೆ ಸಂಸದ ಸುರೇಶ್ ಉಚಿತವಾಗಿ ಹಂಚಿ ಮಾನವೀಯತೆ ಮೆರೆಯುತ್ತಿದ್ಧಾರೆ. ಈ ಮೂಲಕ ಬೆಳೆ ಬೆಳೆದ ರೈತರ ನೆರವಿಗೂ ನಿಂತಿದ್ದಾರೆ.
ಸಂಸದ ಸುರೇಶ್ ರೈತರಿಂದ ಬೆಳೆ ಖರೀದಿಸುತ್ತಿರುವ ವಿಷಯ ತಿಳಿದ ಮಂಡ್ಯ ಜಿಲ್ಲೆಯ ಕೆಲವು ರೈತರಿಗೆ ಗೊತ್ತಾಗಿದೆ. ಈ ಬೆನ್ನಲ್ಲೇ ಮಂಡ್ಯದ ರೈತರು ಸಂಸದ ಸುರೇಶ್ ಗಮನಕ್ಕೆ ತಮ್ಮ ಸಂಕಷ್ಟದ ವಿಚಾರ ತಂದಿದ್ದಾರೆ. ರೈತರ ಸಮಸ್ಯೆ ಆಲಿಸಿದ ಸುರೇಶ್ ಅವರಿಂದಲೂ ಬೆಳೆಗಳನ್ನು ಖರೀದಿಸಿದ್ಧಾರೆ.
ಜಿಲ್ಲೆಯ ನಾಗಮಂಗಲ ಕೆ.ಆರ್ ಪೇಟೆ ಸೇರಿದಂತೆ ಪಾಂಡವಪುರ ಭಾಗದಲ್ಲೂ ಕೂಡ ರೈತರಿಂದ ವಿವಿಧ ತರಕಾರಿ ಮತ್ತು ಹಣ್ಣು ಬೆಳೆ ಖರೀದಿಸಿ ರೈತರ ನೆರವಿಗೆ ಬಂದಿದ್ದಾರೆ ಸುರೇಶ್. ಪಾಂಡವಪುರ ತಾಲೂಕಿನ ಟಿ.ಎಸ್. ಛತ್ರದ ರೈತ ಜಯರಾಮೇಗೌಡ ಮನವಿ ಮೇರೆಗೆ ಇಂದು ಆ ರೈತನ ಜಮೀನಿಗೆ ಆಗಮಿಸಿ 2 ಎಕರೆಯಲ್ಲಿ ಬೆಳೆದ ಟೊಮೋಟೋ ಹೂ ಕೋಸು ಹಾಗೂ ಕುಂಬಳಕಾಯಿ ಬೆಳೆಯನ್ನು ವೀಕ್ಷಣೆ ಮಾಡಿ ಬೆಳೆ ಖರೀದಿ ಮಾಡಿದ್ದಾರೆ.
ಇನ್ನು, ಸ್ಥಳದಲ್ಲಿಯೇ ರೈತನಿಗೆ 2 ಲಕ್ಷ ರೂ ನೀಡಿದ್ದು, ಬೆಳೆಯನ್ನು ಕಟಾವು ಮಾಡಿ ಕೊಂಡೊಯ್ಯುವುದಾಗಿ ಸುರೇಶ್ ಭರವಸೆ ನೀಡಿದ್ಧಾರೆ. ಯಾವುದೇ ರೈತರು ಬೆಳೆ ನಾಶ ಮಾಡಬಾರದು. ಸಂಕಷ್ಟದ ಸಮಯದಲ್ಲಿ ಅದು ಇನ್ನೊಬ್ಬರಿಗೆ ಆಹಾರವಾಗಲಿದೆ ಎಂದಿದ್ದಾರೆ.
ಸರ್ಕಾರವೂ ನಿಮ್ಮ ನೆರವಿಗೆ ಬರಲಿದೆ. ನಾವು ನಿಮ್ಮೊಂದಿಗೆ ಕೈಜೋಡಿಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕ್ಷೇತ್ರದ ಸಂಸದೆ ಸುಮಲತಾ ಮಾಡದ ಕೆಲಸ ಸುರೇಶ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತವಾಗಿದೆ.