ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು ಮುಂದಾಗಿದ್ದಾರೆ. ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ಉದ್ಘಾಟನೆ ಮಾಡಿ ಬಡ ಜೀವಗಳಿಗೆ ನೆರವಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆ ಉದ್ಘಾಟಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್‍ಪಿ ಮೋಹನ್ ಕುಮಾರ್ ಮತ್ತು ಪಿಎಸ್‍ಐ ಮಂಜುನಾಥ್‍ರಿಂದ ಯೋಜನೆಗೆ ಚಾಲನೆ ದೊರಕಿದೆ.
ಈ ಕರುಣೆಯ ಗೋಡೆಯಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ ಬಾಟೆಲ್‍ಗಳನ್ನು ಇಡಲಾಗಿದೆ. ಬಡವರು, ಹಸಿದವರು ಇಲ್ಲಿ ಇಟ್ಟಿರುವ ಆಹಾರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಅಗತ್ಯ ವಸ್ತುಗಳನ್ನು ನೀಡಿ ಬಡವರಿಗೆ ಸಹಾಯ ಮಾಡುವ ಮೂಲಕ ಪೊಲೀಸರ ಜೊತೆ ಕೈಜೊಡಿಸಿ ಎಂದು ಅಧಿಕಾರಿಗಳು ಕೋರಿಕೊಂಡಿದ್ದಾರೆ. ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್‍ರಿಂದ ಗೋಡೆ ನಿರ್ಮಾಣವಾಗಿದ್ದು, ಅಗತ್ಯವಿದ್ದವರೂ ಇಲ್ಲಿಂದ ಯಾವ ವಸ್ತುವನ್ನಾದರೂ ತೆಗೆದುಕೊಳ್ಳಬಹುದಾಗಿದೆ.
ಈ ಬಗ್ಗೆ ಡಿವೈಎಸ್‍ಪಿ ಮೋಹನ್ ಕುಮಾರ್ ಮಾತನಾಡಿ, ಹಸಿದವರ ಹೊಟ್ಟೆ ತುಂಬುವ ಕಾರ್ಯಕ್ಕೆ ನಮ್ಮ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣವರ್ ನೇತೃತ್ವದಲ್ಲಿ ಈ ಕಾರ್ಯ ರೂಪುಗೊಂಡಿದ್ದು ಸಂತಸ ತಂದಿದೆ. ಉಳ್ಳವರು ಇಲ್ಲಿ ಇಟ್ಟು, ಹಸಿದವರು ಪಡೆದುಕೊಳ್ಳುವ ಕಾರ್ಯವನ್ನ ನಮ್ಮ ಟೌನ್ ಪಿಎಸ್‍ಐ ನೇತೃತ್ವದಲ್ಲಿ ಸಿಬ್ಬಂದಿಗಳು ಮಾಡಿದ್ದಾರೆ ಎಂದರು. ಈ ವೇಳೆ ಪೊಲೀಸ್ ಸಿಬ್ಬಂದಿ ಮಲ್ಲಯ್ಯ, ಹೇಮಂತ್ ಕುಮಾರ್ ಪಿಳ್ಳಪ್ಪ, ರಾಜಮ್ಮ ಮತ್ತಿತರು ಉಪಸ್ಥಿತರಿದ್ದರು. ಹಾಗೆಯೇ ಇಂದು ನೂರಾರು ಜನ ಈ ಯೋಜನೆಯ ಸದುಪಯೋಗ ಪಡೆದುಕೊಂಡರು.