ಬೆಂಗಳೂರು, ಏ.23- ಕಳೆದ ಮೂರು ದಿನಗಳಿಂದ ತಣ್ಣಗಿದ್ದ ಬೆಂಗಳೂರಿನಲ್ಲಿ ಇಂದು ಬಿಹಾರಿ ಕೊರೊನಾ ಬಾಂಬ್ ಸಿಡಿದಿದ್ದು, ಬಿಹಾರಿ ಮೂಲದ ಕಾರ್ಮಿಕನಿಂದ ಒಂದೇ ದಿನ 9 ಜನರಿಗೆ ಕೊರೊನಾ ಸೋಂಕು ತಗುಲುವ ಮೂಲಕ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಶತಕ ದಾಟಿದೆ.
ಈ ಮೂಲಕ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು 443ಕ್ಕೆ ಏರಿದ್ದು, ಬೆಂಗಳೂರು ನಗರ-9, ಮಂಡ್ಯ-2 ವಿಜಯಪುರ-2, ಧಾರವಾಡ-2, ದಕ್ಷಿಣ ಕನ್ನಡ-1 ಸೇರಿದಂತೆ ಒಂದೇ ದಿನ 16 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕಳೆದ ಮೂರು ದಿನಗಳಿಂದ ಇಳಿಮುಖವಾಗಿದ್ದ ಕೊರೊನಾ ಪೀಡಿತರ ಸಂಖ್ಯೆ ಇಂದು ಏರಿಕೆಯಾಗಿದ್ದು, ಆತಂಕ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿ ನಿನ್ನೆವರೆಗೂ 91 ಸೋಂಕಿತರಿದ್ದು, 419ರ ವ್ಯಕ್ತಿಯಿಂದ 9 ಜನರಿಗೆ ಕೊರೊನಾ ಹರಡುವ ಮೂಲಕ ಪೀಡಿತರ ಸಂಖ್ಯೆ 100ಕ್ಕೆ ಏರಿದೆ
ಬಿಹಾರಿ ಮೂಲದ ಕಾರ್ಮಿಕನಿಗೆ ಕೊರೊನಾ ಪಾಸಿಟಿವ್ ಇರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈತನ ರೂಮ್‍ನಲ್ಲಿ ವಾಸವಾಗಿದ್ದ 9 ಮಂದಿಗೂ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಇವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರು ವಾಸವಿದ್ದ ಸುತ್ತಮುತ್ತಲಿನ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ವಿಜಯಪುರದಲ್ಲಿ 32 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿತ 221ರ ವ್ಯಕ್ತಿಯಿಂದ ರೋಗ ಹರಡಿದೆ. ಅದೇ ರೀತಿ 25 ವರ್ಷದ ಮಹಿಳೆಗೆ ಕೊರೊನಾ ಹಬ್ಬಿದ್ದು, ರೋಗ ಹೇಗೆ ಹಬ್ಬಿದೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 78 ವರ್ಷದ ವೃದ್ಧೆಗೆ 390ರ ರೋಗಿಯಿಂದ ಸೋಂಕು ತಗುಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಡ್ಯದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ ತಗ್ಗಿತ್ತು. ಇಂದು ಮಂಡ್ಯ ಮತ್ತು ಮಳವಳ್ಳಿಯಲ್ಲಿ ಇಬ್ಬರಿಗೆ ರೋಗ ತಗುಲಿರುವುದು ಪತ್ತೆಯಾಗಿದೆ. 47 ವರ್ಷದ ವ್ಯಕ್ತಿಗೆ 171, 371ರ ಸಂಪರ್ಕದಿಂದ ರೋಗ ತಗುಲಿದೆ.ಅದೇ ರೀತಿ ಮಳವಳ್ಳಿಯ 28 ವರ್ಷದ ಮಹಿಳೆಗೆ 179ರ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ರೋಗ ತಗುಲಿದ್ದು, ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.
# ಬೆಂಗಳೂರಿನ ಹೊಂಗಸಂದ್ರ ಸ್ಲಂನಲ್ಲಿ ವಾಸವಿದ್ದ ಬಿಹಾರಿ ವ್ಯಕ್ತಿ:
ನಗರದ ಹೊಂಗಸಂದ್ರದ ಸ್ಲಂನಲ್ಲಿ ವಾಸವಾಗಿದ್ದ ಬಿಹಾರಿ ಮೂಲದ 54 ವರ್ಷದ ಕಾರ್ಮಿಕನಿಗೆ ಸೋಂಕು ದೃಢಪಟ್ಟಿದ್ದು, ಇದೀಗ ಈ ಪ್ರದೇಶ ಸೀಲ್‍ಡೌನ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸ್ಲಂನಲ್ಲಿ 150ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಈ ವ್ಯಕ್ತಿ ಹುಷಾರಿಲ್ಲ ಎಂದು ಕಳೆದ 15 ದಿನಗಳಿಂದ ವಿವಿಧ ಕ್ಲಿನಿಕ್‍ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಂಡಿರುವುದು ಇದೀಗ ಗೊತ್ತಾಗಿದೆ.
ಜಯದೇವ ಆಸ್ಪತ್ರೆಯಲ್ಲೂ ಈತ ಚಿಕಿತ್ಸೆ ಪಡೆದಿದ್ದನು. ನಿನ್ನೆ ರಾಜೀವ್‍ಗಾಂಧಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಸ್ಲಂ ಜನತೆಯಲ್ಲಿ ಆತಂಕ ಉಂಟಾಗಿದೆ.ಈತನ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈತ ಸೋಂಕು ದೃಢವಾಗುವ ಮೊದಲು ಎಲ್ಲಿ ಬೇಕೋ ಅಲ್ಲೆಲ್ಲ ಓಡಾಡಿರುವುದು ಕಂಡುಬಂದಿದ್ದು, ಈತನ ಜತೆಯಲ್ಲಿದ್ದ 9 ಮಂದಿಗೂ ಕೂಡ ಸೋಂಕು ತಗುಲಿರುವುದು ದೃಢಪಟ್ಟಿದೆ.
# ಕಾರ್ಪೊರೇಟರ್ -ಸ್ಥಳೀಯರಲ್ಲಿ ಆತಂಕ:
ಹೊಂಗಸಂದ್ರದ ಈ ಸ್ಲಂನಲ್ಲಿ ಕಾರ್ಪೊರೇಟರ್ ಕಿಟ್ ವಿತರಿಸಿದ್ದರು. ಅಲ್ಲದೆ, ಸ್ಥಳೀಯ ಮುಖಂಡರು ಇಲ್ಲಿನ ಜನರಿಗೆ ಆಹಾರ ನೀಡಿದ್ದರು. ಆಲ್ಲದೆ, ಸುತ್ತಮುತ್ತಲಿನ ಸ್ಥಳೀಯ ನಿವಾಸಿಗಳಿಗೂ ಅಗತ್ಯ ವಸ್ತುಗಳನ್ನು ಪೂರೈಸಿದ್ದರು. ಆದರೆ ಇದೀಗ ಸ್ಲಂನಲ್ಲಿ ವಾಸವಿದ್ದ ಬಿಹಾರಿ ಮೂಲದ ಕಾರ್ಮಿಕನಲ್ಲಿ ಕೊರೊನಾ ಸೋಂಕು ದೃಢವಾಗಿರುವುದರಿಂದ ಇವರೆಲ್ಲರಲ್ಲೂ ಆತಂಕ ಉಂಟಾಗಿದೆ.