ಬಳ್ಳಾರಿ: ಲಾಕ್‍ಡೌನ್ ಹಿನ್ನೆಲೆ ಸರಣಿ ರಜೆ ಇರೋದರಿಂದ ನದಿಯಲ್ಲಿ ಈಜಲು ತೆರೆಳಿದ್ದ ಮೂವರು ಕಾರ್ಮಿಕರು ನೀರುಪಾಲಾದ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋವೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಇಂದು ಮಧ್ಯಾಹ್ನ ಈಜಾಡಲು ಹೋಗಿದ್ದ ಮೂವರು ಕಾರ್ಮಿಕರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಈಜಾಡಲು ಐದು ಮಂದಿ ತೆರಳಿದ್ದು, ಈ ಪೈಕಿ ಮೂವರು ನೀರು ಪಾಲಾದರೆ, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋವೇನಹಳ್ಳಿ ಗ್ರಾಮದ ನಿವಾಸಿ ಕೋಗಳಿ ಮಾರುತಿ(23), ಮಲ್ಲಿನಕೆರೆ ಸುರೇಶ್(25) ಹಾಗೂ ಹಂಪಸಾಗರ ಗ್ರಾಮದ ಪಿ. ಫಕರುದ್ದೀನ್(25) ಮೃತಪಟ್ಟ ಕಾರ್ಮಿಕರು ಎಂದು ಗುರುತಿಸಲಾಗಿದೆ.
ಮಲ್ಲಿನಕೆರೆ ಸುರೇಶ್ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ದಿನಗೂಲಿ ನೌಕರರಾಗಿದ್ದು, ಉಳಿದ ಇಬ್ಬರು ಕೂಡ ಕೂಲಿಕಾರ್ಮಿಕರಾಗಿದ್ದಾರೆ. ನೀರು ಪಾಲಾದ ಮೃತದೇಹಗಳ ಪತ್ತೆಗೆ ಹಡಗಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ಕುರಿತು ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.