ಬೆಳಗಾವಿ: ನಗರ ಮತ್ತು ಜಿಲ್ಲೆಯ ವಿವಿಧೆಡೆ ದಿನಸಿ ಅಂಗಡಿ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ನಿರ್ದಿಷ್ಟ ಅಂತರದ ಗುರುತು(ಮಾರ್ಕ್) ಮಾಡಲಾಗುತ್ತಿದೆ.
ಸಾಮಗ್ರಿಗಳನ್ನು ಖರೀದಿಸಲು ಆಗಮಿಸುವ ಗ್ರಾಹಕರು ಪರಸ್ಪರ ಅಂತರ ಕಾಯ್ದುಕೊಳ್ಳಲು ಇದರಿಂದ ಅನುಕೂಲವಾಗಲಿದೆ. ಪಾಲಿಕೆ ಆಯುಕ್ತರಾದ ಜಗದೀಶ್ ಕೆ.ಎಚ್.ಅವರ ನೇತ್ರತ್ವದಲ್ಲಿ ಮಾರ್ಕಿಂಗ್ ಕೆಲಸ ನಡೆದಿದೆ.
ಕೃಷ್ಣದೇವರಾಯ ಸರ್ಕಲ್ ಬಳಿ ಇರುವ ಮೋರ್, ರಾಮದೇವ ಹೊಟೇಲ್ ಬಳಿ ಇರುವ ರಿಲಾಯನ್ಸ್ ಮಾಲ್ ಸೇರಿದಂತೆ ನಗರದ ಪ್ರಮುಖ ದಿನಸಿ ಅಂಗಡಿಗಳ ಮುಂದೆ ಜನರು ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಕೊರತೆಯಾಗಬಾರದು ಇದರ ಜೊತೆಗೆ ಗುಂಪು ಗುಂಪಾಗಿ ಜನರು ಸೇರದಂತೆ ನೋಡಿಕೊಳ್ಳುವ ಉದ್ದೇಶವಾಗಿದೆ. ಇದರಿಂದ ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸಾದ್ಯವಾಗುತ್ತದೆ.
ಇದೇ ರೀತಿ ಎಲ್ಲ ತಾಲ್ಲೂಕು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾರ್ಕಿಂಗ್ ಮಾಡುವಂತೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.