ಕಾರವಾರ; ಒಂದು ಚೆಕ್ ಡ್ಯಾಮ್ ನಿರ್ಮಾಣ ಮಾಡೋದು ಆ ಭಾಗದ ರೈತರಿಗೆ ವರದಾನವಾಗಲಿ. ಅಲ್ಲಿನ ಕೃಷಿ ಭೂಮಿಗೆ ಸಮರ್ಪಕವಾಗಿ ನೀರು ಪೂರೈಕೆ ಆಗಲಿ ಎನ್ನುವ ನಿಟ್ಟಿನಲ್ಲಿ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಗ್ರಾಮೀಣ ಭಾಗದಲ್ಲೊಂದು ಚೆಕ್ ಡ್ಯಾಮ್ ನಿರ್ಮಾಣ ಮಾಡಲಾಗಿದೆ. ಇದರ ನಿರ್ವಹಣೆ ಸರಿಯಾಗಿ ಆಗದ ಕಾರಣ ಅಲ್ಲಿನ ಕೃಷಿ ಭೂಮಿಗೂ ಇದರ ನೀರು ಪೂರೈಕೆ ಆಗುತ್ತಿಲ್ಲ. ಬದಲಾಗಿ ಈ ಡ್ಯಾಮ್ನಿಂದ ಅನೇಕ ಸಮಸ್ಯೆಗಳೇ ರೈತರಿಗೆ ಎದುರಾಗುತ್ತಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಹಣಕೋಣ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹೊಟೆಗಾಳಿಯ ಭೀಮಕೋಲ್ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾದ ಚೆಕ್ ಡ್ಯಾಮ್. ಕಳೆದ 2008ರಲ್ಲಿ ಚೆಕ್ ಡ್ಯಾಮ್ ಅನ್ನು ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಈಗ ಡ್ಯಾಮ್ ನಿರ್ವಹಣೆ ನಿಂತ ನೀರಾಗಿದೆ.
ಸಂಬಂಧಿಸಿದ ಇಲಾಖೆಯವರು ಈ ಡ್ಯಾಮ್ ಕಡೆ ತಲೆ ಹಾಕದೆ ಬರೋಬ್ಬರಿ ಒಂದು ವರ್ಷ ಆಗಿದೆ. ಕಳೆದ ವರ್ಷ ಡ್ಯಾಂ ದುರಸ್ತಿಗಾಗಿ 8 ಲಕ್ಷ ವ್ಯಯಿಸಲಾಗಿದೆ. ಆದರೆ ಇವತ್ತು ಈ ಡ್ಯಾಮ್ ಹೇಗೆ ಇದೆಯೋ ಹಾಗೆ ಇದೆ. ಡ್ಯಾಮ್ ಕೆಳಗಡೆ ಹಾಕಿದ ಕಾಂಕ್ರೀಟ್ ಸಂಪೂರ್ಣ ಕೊಚ್ಚಿ ಹೋಗಿದ್ದು, ನೀರಿನ ಮಟ್ಟ ಹೆಚ್ಚಾದರೆ ಈ ಭಾಗದ ಮನೆ ಮಠ ಜಲಾವೃತವಾಗಲಿವೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಜನರು.
ಇನ್ನೂ ಈ ಡ್ಯಾಮ್ ಅಕ್ಕಪಕ್ಕ ಸುಮಾರು 50ಕ್ಕೂ ಹೆಚ್ಚು ಮನೆಗಳಿವೆ. ಸಾವಿರಾರು ಎಕರೆ ಕೃಷಿ ಭೂಮಿ ಇದೆ. ಈ ಹಿಂದೆ ಡ್ಯಾಮ್ ನಿರ್ಮಾಣದ ಮುಂಚೆ ಇಲ್ಲಿನ ರೈತರು ವರ್ಷಕ್ಕೆ ಎರಡು ಬಾರಿ ಭತ್ತದ ಬೆಳೆ ಬೆಳಯುತ್ತಿದ್ದರು. ಆದರೆ ಈಗ ಅವೆಲ್ಲ ಮರೆಯಾಗಿದೆ. ಇಲ್ಲಿನ ಡ್ಯಾಮಿನ ನೀರು ರೈತರಿಗೆ ಉಪಯೋಗವಾಗದೆ ನೇರವಾಗಿ ಸಮುದ್ರ ಸೇರುತ್ತಿದೆ. ಹಾಗೆ ಡ್ಯಾಮಿನ ಕೆಳಗಡೆ ಹಾಕಿದ ಕಾಂಕ್ರೀಟ್ ಕೊಚ್ಚಿ ಹೋಗಿದ್ರಿಂದ ನೀರು ತಿರುವು ಮುರುವಾಗಿ ಹೋಗಿ ಅಪಾಯವನ್ನೆ ಸೃಷ್ಟಿಸುತ್ತಿದೆ ಹೊರತು ಇಲ್ಲಿನ ರೈತರಿಗೆ ವರವಾಗುತ್ತಿಲ್ಲವಂತೆ. ಈಗ ಡ್ಯಾಮಿನ ನಿರ್ವಹಣೆ ಇಲ್ಲದೆ ಮಳೆ ಹೆಚ್ಚಾದಂತಹ ಸಂದರ್ಭದಲ್ಲಿ ಯಾವಾಗ ಬೇಕಾದರೂ ಅಪಾಯ ತಂದಿಡಬಹುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ಉಪಾಯದಿಂದ ನುಣುಚಿಕೊಳ್ಳುತ್ತಿದ್ದಾರೆ.
ಒಟ್ಟಾರೆ ರೈತರಿಗೆ ವರದಾನವಾಗಲಿ ಎಂದು ಡ್ಯಾಮ್ ನಿರ್ಮಾಣ ಮಾಡಿದರೆ ಈ ಡ್ಯಾಮ್ ಈಗ ಯಾರಿಗೂ ಉಪಕಾರವಾಗದೆ ಇಲ್ಲಿನ ರೈತರಿಗೆ ಅಪಾಯವನ್ನೇ ತಂದೊಡ್ಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿದೆ.