ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಭೀತಿ ಇಂದಿರಾ ಕ್ಯಾಂಟೀನಿಗೂ ತಟ್ಟಿದ್ದು, ಪ್ರತಿ ದಿನ ನೂರಾರು ಜನರಿಂದ ತುಂಬಿರುತ್ತಿದ್ದ ಕ್ಯಾಂಟೀನ್ ಗಳು ಇಂದು ಜನರಿಲ್ಲದೆ ಬಣಗುಡುತ್ತಿವೆ.
ಕೂಲಿ ಕಾರ್ಮಿಕರು, ಪ್ರಯಾಣಿಕರು, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ಕ್ಯಾಂಟೀನಿಗೆ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ರಾಜ್ಯಾದ್ಯಂತ ಬಂದ್ ಇರುವುದರಿಂದ ಜನ ಹೋಟೆಲ್ ಗಳಿಗೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆಗೆ 500 ಟೋಕನ್ ಗಳು ಖಾಲಿಯಾಗುತ್ತಿದ್ದವು ಆದರೆ ಇದೀಗ 50 ರಿಂದ 100 ಟೋಕನ್ ಮಾತ್ರ ಹೋಗಿವೆ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳಿದ್ದಾರೆ.
ರಾಯಚೂರಿನಲ್ಲಿ ಆಯೋಜನೆಗೊಂಡಿದ್ದ ಬಹುತೇಕ ಕಾರ್ಯಕ್ರಮಗಳೂ ರದ್ದಾಗಿದ್ದು, ಜನರಿಲ್ಲದೆ ರೈಲು ನಿಲ್ದಾಣ ಬಣಗುಡುತ್ತಿದೆ. ಕಲಬುರಗಿಯಿಂದ ಹಾಗೂ ರಾಯಚೂರಿಗೆ ಓಡಾಡುವ ಜನರ ಸಂಖ್ಯೆ ಅಧಿಕವಾಗಿತ್ತು. ಆದರೆ ಕೊರೊನಾ ವೈರಸ್ ನಿಂದಾಗಿ ವೃದ್ಧ ಸಾವನ್ನಪ್ಪಿದ ನಂತರ ಕಲಬುರಗಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ರಾಯಚೂರು ಬಣಗುಡುತ್ತಿದೆ.
