Breaking News

ಮಸೂದೆ ಬೆಂಬಲಿಸಿದ ಮಾತ್ರಕ್ಕೆ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ: ಅಮಿತ್‌ ಶಾ ಭೇಟಿ ಬಳಿಕ ಕನಿಮೊಳಿ ಹೇಳಿಕೆ

Spread the love

ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ  ಮತ್ತು ಮಹಿಳಾ ಮೀಸಲಾತಿ ಮಸೂದೆಗಳಿಗೆ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ತನ್ನ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ರಾತ್ರಿ ಪಕ್ಷದ ನಾಯಕರು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಶನಿವಾರ ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರದ ಬೆನ್ನಲ್ಲೇ ಟಿ ಆರ್ ಬಾಲು, ಕನಿಮೋಳಿ, ದಯಾನಿಧಿ ಮಾರನ್, ಎ ರಾಜಾ ಮತ್ತು ಪಿ ವಿಲ್ಸನ್ ಅವರಿದ್ದ ಡಿಎಂಕೆ ನಿಯೋಗ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಕನಿಮೊಳಿ, “ಕ್ಷೇತ್ರ ಪುನರ್ವಿಂಗಡಣೆ ಕುರಿತು ಈ ಹಿಂದೆ ನಾವು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದ ಮತ್ತು 2024ರಲ್ಲಿ ತಮಿಳುನಾಡು  ಸರ್ಕಾರ ಅಂಗೀಕರಿಸಿದ್ದ ನಿರ್ಣಯದ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಈಗ ಮಸೂದೆಯಲ್ಲಿ ಸೇರಿಸಿದೆ. ಈ ಹಿಂದೆ 2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮುಂದಾಗಿದ್ದಾಗ, ತಮಿಳುನಾಡಿಗೆ ಸಂಸದರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ನಾವು ವಿರೋಧಿಸಿದ್ದೆವು. ಆದರೆ ಈಗ 1971ರ ಜನಗಣತಿಯ ಆಧಾರದಲ್ಲೇ ಸ್ಥಾನಗಳನ್ನು ಹೆಚ್ಚಿಸಲು ಮತ್ತು ಮುಂದಿನ 25 ವರ್ಷಗಳ ಕಾಲ ಅದೇ ವ್ಯವಸ್ಥೆಯನ್ನು ಮುಂದುವರಿಸಲು ಕೇಂದ್ರ ಒಪ್ಪಿಕೊಂಡಿದೆ ಎಂದು ವಿವರಿಸಿದರು.

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸಿದ ಮಾತ್ರಕ್ಕೆ ನಾವು ಬಿಜೆಪಿ ಜೊತೆಗಿದ್ದೇವೆ ಎಂದರ್ಥವಲ್ಲ; ನಾವು ನಮ್ಮ ನಿಲುವನ್ನು ಎಂದಿಗೂ ಬದಲಿಸಿಕೊಂಡಿಲ್ಲ, ಕೇವಲ ನ್ಯಾಯಯುತವಾದ ಕ್ಷೇತ್ರ ಮರುವಿಂಗಡಣೆಯನ್ನು ಮಾತ್ರ ಬಯಸುತ್ತಿದ್ದೇವೆ ಎಂದು ತಿಳಿಸಿದರು.

ಈ ಹೊಸ ಮಸೂದೆಯ ಅನ್ವಯ, ತಮಿಳುನಾಡಿನ ಲೋಕಸಭಾ ಸ್ಥಾನಗಳ ಸಂಖ್ಯೆ 39ರಿಂದ 59ಕ್ಕೆ ಏರಿಕೆಯಾಗಲಿದೆ. ಅಲ್ಲದೆ, ಈ ಮಸೂದೆ ಅಂಗೀಕಾರವಾದ ಬಳಿಕ ಮಹಿಳಾ ಮೀಸಲಾತಿ ಮಸೂದೆಯೂ ಜಾರಿಯಾಗಲಿದೆ ಎಂದು ಕನಿಮೊಳಿ ಹೇಳಿದ್ದಾರೆ.

ಇದಕ್ಕೂ ಮುನ್ನ ಅಣ್ಣಾ ಅರಿವಾಲಯಂನಲ್ಲಿ ನಡೆದ ಸಂಸದರ ಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್, ಭಾವನೆಗಳಿಗೆ ಒಳಗಾಗದೆ ದೂರದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ಮುಂದಿನ 25 ವರ್ಷಗಳ ಕಾಲ ರಾಜ್ಯದ ಸಂಸದೀಯ ಪ್ರಾತಿನಿಧ್ಯವನ್ನು ರಕ್ಷಿಸುವಲ್ಲಿ ನಮ್ಮ ಪಕ್ಷ ಯಶಸ್ವಿಯಾಗಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಮೇಲಾಗುವ ಪರಿಣಾಮಗಳ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಡಿಎಂಕೆ” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.


Spread the love

About Laxminews 24x7

Check Also

ಲಿಖಿತ ಆದೇಶ ಬೇಕೆಬೇಕು, ಅಲ್ಲಿವರೆಗೆ ನಮ್ಮ ಹೋರಾಟ ಮುಂದುವರಿಯುತ್ತೆ: ನಾಗಲಕ್ಷ್ಮಿ ಎಚ್ಚರಿಕೆ

Spread the love ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ 2,000 ರೂ. ಹೆಚ್ಚಳ ಮಾಡುವುದಾಗಿ ಸಿಎಂ ಭರವಸೆಗೂ ಒಪ್ಪದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ