ಬಳ್ಳಾರಿ: ಸರ್ಕಾರಿ ಆಸ್ಪತ್ರೆ ಅಂದರೆ ಬಡ ರೋಗಿಗಳಿಗೆ ಸಂಜೀವಿನಿ ಆಗಬೇಕು. ಆದರೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತದಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲದೆ ಬಾಣಂತಿಯರು, ನವಜಾತ ಶಿಶುಗಳು ಮೊಬೈಲ್ ಟಾರ್ಚ್ನಲ್ಲಿ ಇಡೀ ರಾತ್ರಿ ಕಳೆಯುವಂತಾಗಿದೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಟಾರ್ಚ್ ಬೆಳಕೆ ಆಸರೆ; ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 30 ಹಾಸಿಗೆಯುಳ್ಳ ತೆಕ್ಕಲಕೋಟೆ ಸಮುದಾಯ ಕೇಂದ್ರದಲ್ಲಿ ಬಾಣಂತಿಯರ ವಾಡ್೯ನಲ್ಲೇ ವಿದ್ಯುತ್ ಕೈಕೊಟ್ಟಿದೆ. ಪರಿಣಾಮ ರಾತ್ರಿ ಇಡೀ ಕರೆಂಟ್ ಇಲ್ಲದೆ, ಗಾಳಿ ಇಲ್ಲದೆ, ಸೊಳ್ಳೆಗಳ ಕಾಟ ತಾಳಲಾರದೆ ಬಾಣಂತಿಯರು ಹಾಗೂ ಹಸುಗೂಸುಗಳು ಪರದಾಡಿವೆ. ಮೊಬೈಲ್ ಟಾರ್ಚ್ ಬೆಳಕಿನಲ್ಲೇ ರಾತ್ರಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಸುಗೂಸುಗಳು ಸೆಕೆ ತಾಳಲಾರದೆ ಅಳುತ್ತಿದ್ದರೆ, ಸಂಬಂಧಿಕರು ಸೀರೆ ಸೆರಗಿನಿಂದಲೇ ಗಾಳಿ ಬಿಸಿ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಣಂತಿಯರು ಮತ್ತು ನವಜಾತ ಶಿಶುಗಳ ವಾಡ್೯ನಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ, ಮೊಬೈಲ್ ಟಾರ್ಚ್ ಬೆಳಕೇ ಆಸರೆಯಾಗಿದೆ. ಆಸ್ಪತ್ರೆಯ ಕಿಟಕಿಗಳಿಗೆ ಸೊಳ್ಳೆ ನಿರೋಧಕ ಜಾಲರಿಯೂ ಇಲ್ಲ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಳವಾಗಿದೆ. ವಿದ್ಯುತ್ ಕೈಕೊಟ್ಟಾಗ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದು ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಣಂತಿಯರು ಹಾಗೂ ನವಜಾತ ಶಿಶುಗಳ ವಾರ್ಡ್ನಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆಯಿಲ್ಲ ಎಂದು ಆರೋಪಿಸಲಾಗಿದೆ. ಪದೇಪದೇ ವಿದ್ಯುತ್ ಕಡಿತವಾಗುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಸಂಬಂಧಿಕರ ಆಕ್ರೋಶ. ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ವಾಡ್೯ನಲ್ಲಿ ಕರೆಂಟ್ ಸಮಸ್ಯೆ ಯಾಕಾಯಿತು, ವಿದ್ಯುತ್ ಕಡಿತದ ವೇಳೆ ಪರ್ಯಾಯ ವ್ಯವಸ್ಥೆ ಏಕೆ ಕಲ್ಪಿಸಿಲ್ಲ ಎಂಬ ಪ್ರಶ್ನೆಗಳು ಮೂಡಿವೆ.
ಡಿಹೆಚ್ಓ ಅಲಕನಂದಾ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಡಿಹೆಚ್ಓ ಅಲಕನಂದಾ ಅವರನ್ನ ಕೇಳಿದರೆ ‘ಯುಪಿಎಸ್ ಆಫ್ ಆಗಿರುವ ಪರಿಣಾಮ ಹೀಗಾಗಿದೆ. ವಿದ್ಯುತ್ ಸಮಸ್ಯೆಯಾದ ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆ ಹರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವರದಿ ಕೊಡಲು ತಿಳಿಸಿದ್ದೇನೆ. ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಕ್ರಮಕೈಕೊಳ್ಳುತ್ತೇನೆ’ ಎಂದಿದ್ದಾರೆ.
ಒಟ್ಟಿನಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ವಾರ್ಡ್ನಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪರಿಶೀಲನೆ ನಡೆಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ, ಸೊಳ್ಳೆ ಕಾಟದಿಂದ ರಕ್ಷಣೆ ಒದಗಿಸಬೇಕಿದೆ.
Laxmi News 24×7