ಗದಗ: ರಾಕಿಂಗ್ ಸ್ಟಾರ್ ಯಶ್ (Rocking star Yash) ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ಊರಿನ ಬೀದಿಯಲ್ಲಿ ಬರ್ತಡೇ ಬ್ಯಾನರ್ ಅಳವಡಿಸುವಾಗ ವಿದ್ಯುತ್ ಪ್ರವಹಿಸಿ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಮೃತ ಕುಟುಂಬಸ್ಥರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಮೃತರನ್ನು ಹನುಮಂತ ಹರಿಜನ(21), ಮುರುಳಿ ನಡುವಿನಮನಿ(20), ನವೀನ್ ಗಾಜಿ(19) ಎಂದು ಗುರುತಿಸಲಾಗಿದೆ.
ಇಂದು ಸಂಜೆ 4 ಗಂಟೆಗೆ ನಟ ಯಶ್ ಭೇಟಿ
ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಗ್ಗೆ ತಿಳಿದ ನಟ ಯಶ್ ಇಂದು ಸಂಜೆ 4 ಗಂಟೆಗೆ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಶೂಟಿಂಗ್ ನಿಮಿತ್ತ ವಿದೇಶಕ್ಕೆ ತೆರಳಿದ್ದ ಅವರು ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಟ್ಟು ಕುಟುಂಬಕ್ಕೆ ಧೈರ್ಯ ತುಂಬಲಿದ್ದಾರೆ ಎನ್ನಲಾಗಿದೆ. ಇಂದು 3 ಗಂಟೆಗೆ ಯಶ್ ಅವರು ಹುಬ್ಬಳ್ಳಿ ಏರ್ ಪೋರ್ಟ್ ರೀಚ್ ಆಗಲಿದ್ದು, ಹುಬ್ಬಳ್ಳಿಯಿಂದ ಲಕ್ಷ್ಮೀಶ್ವರಕ್ಕೆ ತಲುಪಿ ಅಲ್ಲಿಂದ ರಸ್ತೆ ಮಾರ್ಗವಾಗಿ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.