ಬೆಂಗಳೂರು: ಗೋವಾ ಮಾದರಿಯಲ್ಲಿ ಬೆಂಗಳೂರಿನಲ್ಲೂ ನೈಟ್ ಲೈಫ್ ವಿಸ್ತರಣೆ ಮಾಡಬೇಕು ಹಾಗೂ ಹೋಟೆಲ್ ಉದ್ಯಮವನ್ನು 24 ಗಂಟೆಗಳ ಕಾಲ ತೆರೆಯಲು ಅವಕಾಶ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘಟನೆಗಳು ಒತ್ತಾಯಿಸಿವೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಲಾಗಿದೆ.
ಹೋಟೆಲ್ ಮಾಲೀಕರ ಈ ಬೇಡಿಕೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿ ನೈಟ್ ಲೈಫ್ ವಿಸ್ತರಣೆ ಹಾಗೂ ಟ್ರಾಫಿಕ್ ನಿಯಂತ್ರಣದ ಕುರಿತು ಈ ಹಿಂದೆ ಪ್ರಧಾನಮಂತ್ರಿಗಳೇ ಮಹತ್ವದ ಸಲಹೆ ನೀಡಿದ್ದರು ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ, ಹೀಗಾಗಿ ಮೆಟ್ರೋ ‘ರೆಡ್ ಲೈನ್’ ಯೋಜನೆಗೆ ಅನುಮತಿ ನೀಡಿ ಎಂದು ನಾನು ಪ್ರಧಾನಿಯವರಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿಯವರು, ಬರೀ ರೆಡ್ ಲೈನ್‌ನಿಂದಲೇ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಿಲ್ಲ. ಟ್ರಾಫಿಕ್ ಪೀಕ್ ಅವರ್ಸ್ ಗಮನದಲ್ಲಿಟ್ಟುಕೊಂಡು ಕಚೇರಿಗಳ ಸಮಯ ಹಾಗೂ ಶಿಫ್ಟ್ ಬದಲಾವಣೆಗೆ ಸೂಚಿಸಬೇಕು. ಬೆಳಗ್ಗೆ ಮತ್ತು ರಾತ್ರಿ ಪಾಳಿಯ ಸಮಯವನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು ಎಂದರು.
ಇನ್ನು 24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೋರಿ ಹೋಟೆಲ್ ಮಾಲೀಕರ ಸಂಘಟನೆಗಳು ಬರೆದಿರುವ ಪತ್ರದ ಕುರಿತು ಮಾತನಾಡಿದ ಸಚಿವರು, ನೈಟ್ ಲೈಫ್ ವಿಸ್ತರಣೆಗೆ ಹೋಟೆಲ್‌ನವರು ಪತ್ರ ಬರೆದಿರುವುದು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ಈ ಹಿಂದೆ ರಾತ್ರಿ 10 ಗಂಟೆಯವರೆಗೆ ಮಾತ್ರ ಇದ್ದ ಅವಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೊಂಚ ವಿಸ್ತರಣೆ ಮಾಡಿದ್ದೇವೆ. ಇದೀಗ ಹೋಟೆಲ್ ಮಾಲೀಕರ ಮನವಿಯ ಬಗ್ಗೆ ಮುಂದೆ ಪರಿಶೀಲಿಸಿ ನೋಡೋಣ ಎಂದು ತಿಳಿಸಿದ್ದಾರೆ.
Laxmi News 24×7