ಬೆಂಗಳೂರು: ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣ ವಿಚಾರಣೆ ನಡೆಸಿದ್ದ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿತು. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ನಾಳೆ ಪ್ರಕಟಿಸಲಿದೆ.
21 ಆರೋಪಿಗಳ ಪೈಕಿ 17 ಮಂದಿ ದೋಷಿಗಳಾಗಿದ್ದಾರೆ. 20ನೇ ಆರೋಪಿ ವಾಸುದೇವ ನಿಲಕೇಣಿ, 21ನೇ ಆರೋಪಿ ಸೋಮಶೇಕರ್ ನ್ಯಾಮಗೌಡ ಅವರನ್ನು ಕೋರ್ಟ್ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ. ಎಲ್ಲಾ ದೋಷಿಗಳನ್ನು ಕಸ್ಟಡಿಗೆ ಪಡೆಯುವಂತೆ ಕೋರ್ಟ್ ಸಿಬಿಐಗೆ ಸೂಚಿಸಿದೆ. ಎ-1 ಬಸವರಾಜ್ ಮುತ್ತಗಿ ಮತ್ತು ಎ17 – ಶಿವಾನಂದ ಬಿರಾದರ್ ಸರ್ಕಾರಿ ಸಾಕ್ಷಿಗಳಾಗಿರುವ ಕಾರಣ ಅವರನ್ನು ಕೋರ್ಟ್ ನಿರ್ದೋಷಿ ಎಂದು ಹೇಳಿದೆ.
ಸಿಆರ್‌ಪಿಸಿ ಸೆಕ್ಷನ್ 302 (ಕೊಲೆ), 120B (ಕ್ರಿಮಿನಲ್ ಪಿತೂರಿ), ಸೆಕ್ಷನ್ 201 (ಸಾಕ್ಷ್ಯ ನಾಶ), ಸೆಕ್ಷನ್ 148 (ಮಾರಕಾಸ್ತ್ರಗಳೊಂದಿಗೆ ಗಲಭೆ), ಸೆಕ್ಷನ್ 149 (ಸಾಮಾನ್ಯ ಉದ್ದೇಶ) ಅಡಿ ಆರೋಪಗಳು ಸಾಬೀತಾಗಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಯಾರೆಲ್ಲ ದೋಷಿಗಳು?
ಎ2 – ವಿಕ್ರಂ, ಎ3 – ಕೀರ್ತಿಕುಮಾರ್, ಎ4 – ಸಂದೀಪ್, ಎ5 – ವಿನಾಯಕ, ಎ6 – ಮಹಾಬಲೇಶ್ವರ, ಎ7- ಸಂತೋಷ, ಎ8 – ದಿನೇಶ್, ಎ9 – ಅಶ್ವಥ್, ಎ10 – ಸುನೀಲ್, ಎ11- ನಜೀರ್ ಅಹ್ಮದ್, ಎ12 -ಶಾನವಾಝ್, ಎ13 – ನೂತನ್, ಎ14 – ಹರ್ಶಿತ್, ಎ15 – ವಿನಯ ಕುಲಕರ್ಣಿ, ಎ16 – ಚಂದ್ರಶೇಖರ್ ಇಂಡಿ, , ಎ18 – ವಿಕಾಸ್ ಕಲಬುರಗಿ, ಎ19 – ಚನ್ನಕೇಶವ ಟಿಂಗರಿಕರ್,
2016ರಲ್ಲಿ ಕೊಲೆ ನಡೆದಾಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ಜೈಲಿನಲ್ಲಿ ಇದ್ದುಕೊಂಡೇ ಯೋಗಿಶ್ ಗೌಡ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರಿಂದ ಹೈ ಪ್ರೊಫೈಲ್ ಕೇಸ್ ಆಗಿತ್ತು. ಈ ಕೊಲೆಯಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ್ ಕುಲಕರ್ಣಿ ಹೆಸರು ಬಂದಿದ್ದರಿಂದ ಮತ್ತಷ್ಟು ಸಂಚಲನ ಮೂಡಿಸಿತ್ತು.
ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಉಲ್ಲೇಖಿಸಿತ್ತು.
ಕೊಲೆಯಾಗಿದ್ದು ಯಾಕೆ?
ಯೋಗೇಶ್‌ಗೌಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟ ಏರಲು ವಿನಯ್ ಕುಲಕರ್ಣಿ ಕಾರಣವಾಗಿದ್ದರು. ಒಪ್ಪಂದದಂತೆ ಒಂದು ವರ್ಷದ ಬಳಿಕ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಅದರೆ ಅಧಿಕಾರ ಹಸ್ತಾಂತರ ಮಾಡದ್ದು ವಿನಯಕ್ ಕುಲಕರ್ಣಿ ಸಿಟ್ಟಿಗೆ ಕಾರಣವಾಗಿತ್ತು.
ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸ್ಥಾನಕ್ಕೆ ಯೋಗೇಶ್ ಗೌಡ ನಿಂತಾಗ ಎಲೆಕ್ಷನ್ ನಡೆಯಬೇಕಿದ್ದ ದಿನವೇ ಅವರನ್ನು ಬಂಧಿಸಲಾಗಿತ್ತು. ಪಿಎಸ್‌ಐ ಮೇಲೆ ಹಲ್ಲೆ ಎಸಗಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿತ್ತು. ಹೀಗಿದ್ದರೂ ಜೈಲಿನಲ್ಲಿದ್ದಾಗಲೇ ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ದಿದ್ದರು. ಇದು ರಾಜಕೀಯ ದ್ವೇಷಕ್ಕೆ ಕಾರಣವಾಗಿತ್ತು.
ಚುನಾವಣೆಯಲ್ಲಿ ಗೆದ್ದು ಬಂದ ನಂತರ 2016ರ ಏಪ್ರಿಲ್‌ನಲ್ಲಿ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಗಿದ್ದ ವಿನಯ ಕುಲಕರ್ಣಿ ಅವರ ಜೊತೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ಇದು ವಿನಯ್ ಕುಲಕರ್ಣಿ ಅವರನ್ನು ಕೆರಳಿಸಿದ್ದರಿಂದ ಇವರ ನಡುವೆ ಮತ್ತಷ್ಟು ವೈಮನಸ್ಸಿಗೆ ಕಾರಣ ಆಗಿತ್ತು.
ಏಪ್ರಿಲ್ ಕಳೆದ ಬಳಿಕ ಜೂನ್ 15 ರಂದು ಯೋಗೇಶ್ ಗೌಡ ಧಾರವಾಡದ ಸಪ್ತಾಪೂರದ ಉದಯ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.
ರಾಜಕೀಯ ದ್ವೇಷದಿಂದಲೇ ಕೊಲೆ ನಡೆದಿದೆ ಎಂದು ಬಿಜೆಪಿ ಆರೋಪಗಳ ಸುರಿಮಳೆಗೈದಿತ್ತು. ಪೊಲೀಸರು ಕೂಡ ಎಫ್‌ಐಆರ್‌ನಲ್ಲಿ ಜಮೀನು ವಿವಾದದಿಂದಲೇ ಕೊಲೆ ನಡೆದಿದೆ ಎಂದು ದಾಖಲಿಸಿದ್ದರು. ಹೆಚ್ಚಿನ ತನಿಖೆ ನಡೆಸಲು ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಘಟಾನುಘಟಿ ನಾಯಕರು ಅಂದಿನ ಗೃಹ ಸಚಿವ ಪರಮೇಶ್ವರ್ ಮೇಲೆ ಒತ್ತಡ ಹೇರಿದ್ದರು. ಸರ್ಕಾರ ಮಾತ್ರ ಹೆಚ್ಚಿನ ತನಿಖೆಗೆ ಮುಂದಾಗಿರಲಿಲ್ಲ. ಬಳಿಕ 2019ರಲ್ಲಿ ಬಿಎಸ್‌ವೈ ಸರ್ಕಾರ ರಚನೆಯಾದ ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ತನಿಖೆ ಆರಂಭಿಸಿದ ಸಿಬಿಐ ವಿನಯ್ ಕುಲಕರ್ಣಿ ಅವರನ್ನು 15ನೇ ಆರೋಪಿಯನ್ನಾಗಿ ಮಾಡಿತ್ತು.
ಕೊಲೆಯ ಸಾಕ್ಷಿ ನಾಶ ಮಾಡಲು ವಿನಯ ಕುಲಕರ್ಣಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದುಸಿಬಿಐ ತನಿಖೆಯಲ್ಲಿ ಹೇಳಿತ್ತು. ಈ ಕಾರಣಕ್ಕೆ ವಿನಯ್ ಕುಲಕರ್ಣಿ ಅವರನ್ನು 2020ರಲ್ಲಿ ಸಿಬಿಐ ಬಂಧನ ಮಾಡಿತ್ತು. ಅಲ್ಲದೇ ಪೊಲೀಸ್ ಎಫ್‌ಐಆರ್‌ನಲ್ಲಿ ಇರುವ ಆರೋಪಿಗಳು ಕೊಲೆ ಮಾಡಿಲ್ಲ ಎನ್ನುವ ವಿಚಾರವನ್ನು ಜಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿತ್ತು.
Laxmi News 24×7