Breaking News

ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳ ಗ್ಯಾರಂಟಿ ಯೋಜನೆಗಳ ಅನುದಾನದ ವಿವರ ಕೇಳಿದ ಆಯೋಗ

Spread the love

ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳ ಗ್ಯಾರಂಟಿ ಯೋಜನೆಗಳ ನಗದು ಹಣ ಬಿಡುಗಡೆ ಮಾಡದೇ ತಡೆ ಹಿಡಿಯಲಾಗಿದ್ದು, ಇದೀಗ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ  ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ, ಏಕಕಾಲಕ್ಕೆ ಗ್ಯಾರಂಟಿ ಯೋಜನೆ ಹಣವನ್ನು ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ದಾವಣಗೆರೆ ದಕ್ಷಿಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ರೆ, ಇದಕ್ಕೆ ರಾಜ್ಯ ಸರ್ಕಾರ ಅಲ್ಲಗಳೆದಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇನ್ನೇನು ಚುನಾವಣಾ ಆಯೋಗ  ಮಧ್ಯೆ ಪ್ರವೇಶಿಸಿದ್ದು, ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುದಾನದ ವಿವರ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ದಾವಣಗೆರೆ ಹಾಗೂ ಬಾಗಲಕೋಟೆ ಬೈ ಎಲೆಕ್ಷನ್ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ಆರೋಪ ಸಂಬಂಧ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದೆ. ಮಾದರಿ ನೀತಿ ಸಂಹಿತೆ ಜಾರಿಯಾದ ಬಳಿಕ ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ (ಬಾಗಲಕೋಟೆ, ದಾವಣಗೆರೆ ದಕ್ಷಿಣ) ಎಷ್ಟು ಹಣ ಬಿಡುಗಡೆಗೊಳಿಸಲಾಗಿದೆ? ಗೃಹ ಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಗ್ಯಾರಂಟಿ ಯೋಜನೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ? ಎನ್ನುವ ಬಗ್ಗೆ ವಿವರ ನೀಡುವಂತೆ ಪತ್ರದ ಮೂಲಕ ಸೂಚಿಸಿದೆ.

ಒಂದು ವೇಳೆ ಹಣ ಬಿಡುಗಡೆ ಮಾಡಿದ್ದರೆ ಎಸಿ ಮಟ್ಟದ ಅಧಿಕಾರಿ ಅಥವಾ ಸಂಬಂಧ ಪಟ್ಟ ಅಧಿಕಾರಿಯ ವಿವರ ಸಮೇತ ಮಾಹಿತಿ ನೀಡಿ. ಬಿಡುಗಡೆ ಮಾಡಿಲ್ಲ ಅಂದರೆ ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆಯದೇ ಹಣ ಬಿಡುಗಡೆ ಮಾಡಬೇಡಿ ಎಂದು ಚುನಾವಣಾ ಆಯೋಗ ತಿಳಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೌತಮ್ ಕುಮಾರ್ ಜೈನ್ ಅವರು ಗ್ಯಾರಂಟಿ ಹಣ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಎರಡೂ ಕ್ಷೇತ್ರಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡುವುದಕ್ಕೆ ಪೂರ್ವಭಾವಿಯಾಗಿ ಸರ್ಕಾರವು ಚುನಾವಣಾ ಆಯೋಗದಿಂದ ಅನುಮತಿ ಪಡೆದಿಲ್ಲ. ಹಾಗಾಗಿ ಚುನಾವಣೆ ಮುಗಿಯುವವರೆಗೆ ಗ್ಯಾರಂಟಿ ಹಣ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರ್ಟ್​​ಗೆ ಮನವಿ ಮಾಡಿದ್ದಾರೆ.

ಮಾರ್ಚ್ 23ರಂದು ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ನೀತಿ ಸಂಹಿತೆ ಜಾರಿಯಾದ ಮೇಲೆ ಹಣ ಬಿಡುಗಡೆ ಮಾಡಿ, ಫಲಾನುಭವಿಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಿಸಿದೆ. ಹಾಗಾಗಿ ಉಪಚುನಾವಣೆ ನಡೆಯುತ್ತಿರುವ ಜಿಲ್ಲೆಗಳಲ್ಲಿ ಅನುಮತಿ ಪಡೆದು ಹಣ ಬಿಡುಗಡೆ ಮಾಡಲಿ ಎಂದಿದ್ದಾರೆ. ಆದ್ರೆ, ಇದನ್ನು ಬಲವಾಗಿ ಅಲ್ಲಗಳೆದ ರಾಜ್ಯ ಸರ್ಕಾರ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಆರು ತಿಂಗಳಿನಿಂದ ಗ್ಯಾರಂಟಿ ಯೋಜನೆ ಹಣ ನೀಡಲಾಗಿಲ್ಲ ಎಂಬುವುದಕ್ಕೆ ಅರ್ಜಿದಾರರು ದಾಖಲೆ ಸಲ್ಲಿಸಬೇಕು. ಗ್ಯಾರಂಟಿ ಯೋಜನೆಯ ಭಾಗವಾಗಿ ಫೆಬ್ರವರಿವರೆಗೆ ಏನೆಲ್ಲಾ ವಿತರಣೆ ಮಾಡಲಾಗಿದೆ ಎಂಬುವುದಕ್ಕೆ ದಾಖಲೆ ಸಲ್ಲಿಸಲಾಗುವುದು. ಒಂದು ವೇಳೆ ಅರ್ಜಿದಾರರು ಆಕ್ಷೇಪಿಸಿರುವಂತೆ ನಡೆದುಕೊಂಡೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿದೆ. ಅದೇನೂ ಹಲ್ಲಿಲ್ಲದ ಹಾವಲ್ಲವಲ್ಲಾ ಎಂದು ಹೇಳಿದ್ದಾರೆ.

ಇನ್ನು ಕೇಂದ್ರ ಚುನಾವಣಾ ಆಯೋಗದ ಪರ ಎಸ್​​ಆರ್ ದೊಡ್ಡವಾಡ ಅವರು ವಾದ ಮಂಡಿಸಿದ್ದು, ಮಾದರಿ ನೀತಿ ಸಂಹಿತೆಗೆ ಅನುಗುಣವಾಗಿ ಎರಡೂ ಕ್ಷೇತ್ರಗಳ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂಬ ಅಂಶವನ್ನು ಕೋರ್ಟ್​ ಗಮನಕ್ಕೆ ತಂದಿದ್ದಾರೆ. ಈ ವಾದ ಪ್ರತಿವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ