ನೆಲಮಂಗಲ: ನೆಲಮಂಗಲ – ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವ ವೇಳೆ ಕಾರು ಅಪಘಾತದಿಂದ ಕೋಮಾಗೆ ಹೋಗಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ದಾರುಣ ಘಟನೆ ನಡೆದಿದೆ.
ಕಳೆದ ತಿಂಗಳು 26 ರಂದು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಾಂತಿನಗರ ಗ್ರಾಮದ ಬಳಿ ಕಾರು ಅಪಘಾತ ನಡೆದಿತ್ತು. ಕಾರು ಅಪಘಾತದಲ್ಲಿ ದೀಪ್ತಿ ಎಂಬ 5 ವರ್ಷದ ಬಾಲಕಿ ಗಂಭೀರ ಗಾಯಗೊಂಡು ಒಂದು ತಿಂಗಳಿನಿಂದ ಕೋಮಾದಲ್ಲಿದ್ದಳು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಸುಮಿತ್ರ ಹಾಗೂ ಮಂಜುನಾಥ್ ದಂಪತಿಯ ಪುತ್ರಿ ದೀಪ್ತಿ ಅಂಗನವಾಡಿಯಲ್ಲಿ ಓದುತ್ತಿದ್ದು, ಪೋಷಕರ ಜೊತೆಗೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದ ಪರಿಣಾಮ ದೀಪ್ತಿ ಒಂದು ತಿಂಗಳಿನಿಂದ ಕೋಮಾದಲ್ಲಿದ್ದಳು. ಚಿಕಿತ್ಸೆಗೆ ಬಾಲಕಿಯ ಪೋಷಕರು ಲಕ್ಷಾಂತರ ರೂ. ಹಣ ಖರ್ಚು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾಳೆ.
ಹೀಗಾಗಿ ಸ್ಥಳೀಯರು ಶಾಂತಿನಗರದ ಗ್ರಾಮದ ಬಳಿ ಸ್ಕೈವಾಕ್ ಅಥವಾ ಸರ್ವೀಸ್ ರಸ್ತೆ ಮಾಡುವಂತೆ ಆಗ್ರಹಿದ್ದಾರೆ. ಇಲ್ಲಿ ರಸ್ತೆ ದಾಟುವ ವೇಳೆ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತದ ಆತಂಕದಲ್ಲಿ ಶಾಂತಿನಗರದ ಜನರು ಇದ್ದು, ಕೂಡಲೇ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಶಾಂತಿ ನಗರದಲ್ಲಿ ಸ್ಕೈವಾಕ್ (Sky Walk) ಮಾಡುವಂತೆ ಆಗ್ರಹಿದ್ದಾರೆ. ಇನ್ನೂ ಘಟನೆ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Laxmi News 24×7