ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಹಾರಲಾಗದೆ ನಾಲ್ಕು ದಿನಗಳಿಂದ ಹೈ ಟೆನ್ಷನ್ ವೈರ್‌ಗೆ ನೇತು ಬಿದ್ದಿದ್ದ ಹದ್ದೊಂದನ್ನು ರಕ್ಷಿಸಲಾಗಿದೆ.
ಹೈ ಟೆನ್ಷನ್ ವೈರ್ ಮೇಲೆ ಬಿದ್ದಿದ್ದ ಮಾಂಜಾ ದಾರದಲ್ಲಿ ಹದ್ದು ಸಿಲುಕಿಕೊಂಡಿತ್ತು. ಆಹಾರ ಮತ್ತು ನೀರಿಲ್ಲದೆ ಮೇಲೆಯೇ ನರಳಾಡುತ್ತಿತ್ತು. ಹದ್ದು ನೇತಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ವಿಕಾಸ್ ಎಂಬವರು ತಕ್ಷಣ ಬನ್ನೇರುಘಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ , ಬೆಸ್ಕಾಂ ಹಾಗೂ ರೆಸ್ಕ್ಯೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ, ಮಾಂಜಾ ದಾರ ಕತ್ತರಿಸಿ ಹದ್ದನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ನಾಲ್ಕು ದಿನಗಳಿಂದ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಹದ್ದಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಚೇತರಿಸಿಕೊಂಡ ನಂತರ ಹದ್ದನ್ನು ಮತ್ತೆ ಕಾಡಿಗೆ ಬಿಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪಕ್ಷಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿರುವ ಮಾಂಜಾ ದಾರವನ್ನು ದಯವಿಟ್ಟು ಯಾರೂ ಬಳಸಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
Laxmi News 24×7