Breaking News

ನನ್ನನ್ನ ಬಂಡೆ ಲೂಟಿಕೋರ ಅಂತಾರೆ, ಆರೋಪ ಮಾಡೋರು ಕನಕಪುರಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಲಿ: ಡಿಕೆಶಿ ಸವಾಲ್

Spread the love

ರಾಮನಗರ: ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆ ಕನಕಪುರದ ಮುನ್ಸಿಪಲ್ ಮೈದಾನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಡಿಕೆ ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಡಿಕೆಶಿ, ನಾನು ಯಾವತ್ತೂ ಸನ್ಮಾನ ಮಾಡಿಸಿಕೊಳ್ಳುವವನಲ್ಲ. ನನಗೆ ಸಿಕ್ಕಿರುವ ಈ ಅಧಿಕಾರ ನನ್ನದಲ್ಲ, ಅದು ನಿಮ್ಮದು. 10 ಬಾರಿ ನನ್ನನ್ನು ಆಶೀರ್ವದಿಸಿ ಬೆಳೆಸಿದ್ದೀರಿ. ನನಗೆ ಯಾವುದೇ ಜಾತಿಯ ಬಗ್ಗೆ ನಂಬಿಕೆ ಇಲ್ಲ, ನನ್ನದು ಮಾನವ ಜಾತಿ ಹಾಗೂ ಮನುಷ್ಯತ್ವವೇ ಮುಖ್ಯ.

ಕಳೆದ ಚುನಾವಣೆಯಲ್ಲಿ ಕನಕಪುರಕ್ಕೆ ಮತ ಕೇಳಲು ಬರದಿದ್ದರೂ ನೀವು ಗೆಲ್ಲಿಸಿದ್ದೀರಿ. ನಾನು ಮತ್ತು ಸಿದ್ದರಾಮಯ್ಯ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು, ಟೀಕೆಗಳ ನಡುವೆಯೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಬಡವರು ಕಾರು, ಸೈಟ್ ಖರೀದಿಸುವಂತಾಗಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಕೈಗೊಂಡಿದ್ದೇವೆ. ವಲಸೆ ತಪ್ಪಿಸಲು ರೇಷ್ಮೆ, ಹೈನುಗಾರಿಕೆಗೆ ಒತ್ತು ನೀಡಿ ಹಾಲಿನ ದರವನ್ನು 7 ರೂ. ಹೆಚ್ಚಿಸಿದ್ದೇವೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ಜಯ ಸಿಕ್ಕಿದ್ದು, ನಮ್ಮ ಅವಧಿಯಲ್ಲೇ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದೇವೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ, ಹಾರೋಹಳ್ಳಿ, ಕನಕಪುರ ಹಾಗೂ ರಾಮನಗರ ಸೇರಿದಂತೆ ಒಂದೇ ಜಿಲ್ಲೆಯಲ್ಲಿ 4 ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗುತ್ತಿರುವುದು ದೇಶದಲ್ಲೇ ಮೊದಲು. ಹೆಗ್ಗನೂರು ಬಳಿ ಕೆಪಿಎಸ್ ಶಾಲೆ ತೆರೆದು ಸ್ಥಳೀಯವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ, ಸಿಎಂ ಸರ್ಕಾರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಇರುತ್ತೇನೆಂದಾಗ ಒಪ್ಪಿಕೊಂಡು, ನಾನು ಈಗ ‘ಗಂಗಾ’ ನಿವಾಸಕ್ಕೆ ಸ್ಥಳಾಂತರಗೊಂಡಿದ್ದು, ಸಾರ್ವಜನಿಕರ ಭೇಟಿಗೆ ಸಮಯ ನೀಡುತ್ತಿದ್ದೇನೆ ಎಂದು ತಿಳಿಸಿದರು.

ನನ್ನ 40 ವರ್ಷಗಳ ರಾಜಕಾರಣದಲ್ಲಿ ಒಬ್ಬರ ಬಳಿಯೂ ಲಂಚ ಪಡೆದಿಲ್ಲ. ನಿಮಗೆ ಅಗೌರವ ತರುವ ಕೆಲಸ ಮಾಡಿಲ್ಲ. ಆದರೂ ಕೆಲವರು ನನ್ನ ಮೇಲೆ ರಿಯಲ್ ಎಸ್ಟೇಟ್ ಆರೋಪ ಮಾಡುತ್ತಾರೆ, ‘ಬಂಡೆ ಲೂಟಿ ಮಾಡುತ್ತದೆ’ ಎಂದು ಟೀಕಿಸುತ್ತಾರೆ. ನಾನು ಯಾರ ಜೇಬಿಗೂ ಕೈ ಹಾಕಿಲ್ಲ, ಯಾರ ಆಸ್ತಿಯನ್ನೂ ಹೊಡೆದಿಲ್ಲ ಎಂದು ಸಿಎಂ ತಿಳಿಸಿದರು.

ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಪಂಥಾಹ್ವಾನ ನೀಡಿದ ಡಿಕೆಶಿ, ನನ್ನ ಮೇಲೆ ಆರೋಪ ಮಾಡುವ ಯಾರು ಬೇಕಾದರೂ ಬಂದು ಇಲ್ಲಿ ಚುನಾವಣೆಗೆ ನಿಲ್ಲಲಿ. ಈ ಹಿಂದೆಯೂ ಬಂದು ಸ್ಪರ್ಧಿಸಿದ್ದರಲ್ಲ, ಆಗ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕನಕಪುರಕ್ಕೆ ಬಂದು ಸ್ಪರ್ಧಿಸುವಂತೆ ಸವಾಲು ಹಾಕಿದರು.


Spread the love

About Laxminews 24x7

Check Also

ರಾಜ್ಯದ 440 ಪದವಿ ಕಾಲೇಜುಗಳಿಗೆ ಶೀಘ್ರ ಖಾಯಂ ಪ್ರಾಂಶುಪಾಲರ ನೇಮಕ: ಸಚಿವ ರಾಯರೆಡ್ಡಿ

Spread the loveಗದಗ: ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯದ 440 ಸರ್ಕಾರಿ ಪದವಿ ಕಾಲೇಜುಗಳಿಗೆ ಶೀಘ್ರದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ