ಬೆಂಗಳೂರು: ಪ್ರೀತಿಸಿ, ಲಿವಿಂಗ್ ಟುಗೆದರ್ನಲ್ಲಿದ್ದು ಬಳಿಕ ಬ್ರೇಕಪ್ ಮಾಡಿಕೊಂಡ ಯುವಕನೊಬ್ಬ, ಸೇಡು ತೀರಿಸಿಕೊಳ್ಳಲು ತನ್ನ ಮಾಜಿ ಪ್ರಿಯತಮೆಯ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ಸೈಟ್ಗೆ ಅಪ್ಲೋಡ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಅಭ್ಯುದಯ್ ಪುರೋಹಿತ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದು, ನೊಂದ ಸಂತ್ರಸ್ತ ಯುವತಿ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂತ್ರಸ್ತ ಯುವತಿ ಮತ್ತು ಆರೋಪಿ ಅಭ್ಯುದಯ್ ಪುರೋಹಿತ್ 2023ರಿಂದ 2024ರವರೆಗೆ ಪರಸ್ಪರ ಪ್ರೀತಿಸಿ ಲಿವಿಂಗ್ ಟುಗೆದರ್ ನಡೆಸುತ್ತಿದ್ದರು. ಈ ಅವಧಿಯಲ್ಲಿ ಇಬ್ಬರೂ ಜೊತೆಯಾಗಿದ್ದ ಖಾಸಗಿ ಕ್ಷಣಗಳ ವಿಡಿಯೋಗಳನ್ನು (Video) ಆರೋಪಿ ಚಿತ್ರೀಕರಿಸಿಕೊಂಡಿದ್ದ.
ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ಬ್ರೇಕಪ್ ಮಾಡಿಕೊಂಡಿದ್ದರು. ಸಂಬಂಧ ಮುರಿದುಬಿದ್ದ ನಂತರ, ತಮ್ಮ ಖಾಸಗಿ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಸಂತ್ರಸ್ತೆ ಅಭ್ಯುದಯ್ಗೆ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ವಿಡಿಯೋ ಅಳಿಸಿ ಹಾಕುವುದಾಗಿ ಆರೋಪಿ ಒಪ್ಪಿಕೊಂಡಿದ್ದ.
ವಿಡಿಯೋಗಳನ್ನು ಡಿಲೀಟ್ ಮಾಡದ ಆರೋಪಿ ಅಭ್ಯುದಯ್, ಇತ್ತೀಚೆಗೆ ಆ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್ಸೈಟ್ಗೆ ಅಪ್ಲೋಡ್ ಮಾಡಿದ್ದಾನೆ. ಈ ವಿಚಾರ ತಿಳಿದು ಆಘಾತಕ್ಕೊಳಗಾದ ಸಂತ್ರಸ್ತೆ, ವೆಬ್ಸೈಟ್ನ ಲಿಂಕ್ ಸಮೇತ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Laxmi News 24×7