ಲಕ್ನೋ: ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ರಾಜ್ಯದಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹಾಗೂ ಉದ್ಯೋಗ ಸಿಗುವವರೆಗೆ ಪದವೀಧರರಿಗೆ ಪ್ರತಿ ತಿಂಗಳು 5,000 ರೂ. ನಿರುದ್ಯೋಗ ಭತ್ಯೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಲಕ್ನೋದಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಚ್ಛೇ ದಿನ್ ಆಯೇ ನಹೀಂ, ಬುರೇ ದಿನ್ ಜಾನೆ ವಾಲೇ ಹೈ (ಒಳ್ಳೆಯ ದಿನಗಳು ಬರಲೇ ಇಲ್ಲ, ಆದರೆ ಕೆಟ್ಟ ದಿನಗಳು ಅಂತ್ಯಗೊಳ್ಳಲಿವೆ) ಎಂದು ಹೇಳಿದ್ದಾರೆ. ಈ ಮೂಲಕ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಳಸಿದ್ದ `ಅಚ್ಛೇ ದಿನ್ ಆನೇ ವಾಲೇ ಹೈ’ ಘೋಷಣೆಗೆ ತಿರುಗೇಟು ನೀಡಿದ್ದಾರೆ.
ಸಮಾಜವಾದಿ ಪಕ್ಷದ ಪ್ರಣಾಳಿಕೆಗೆ `ಜನ-ಮನ್ ಕಾ ಮ್ಯಾನಿಫೆಸ್ಟೋ’ ಮತ್ತು `ಪಿಡಿಎ ಕಾ ಪ್ರಾಣ್ ಪತ್ರ’ ಎಂದು ಹೆಸರಿಡಲಾಗಿದೆ. ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳನ್ನು ಕೇಂದ್ರವಾಗಿಟ್ಟುಕೊಂಡು ಪ್ರಣಾಳಿಕೆಯನ್ನು ರೂಪಿಸಲಾಗಿದೆ. ಪಿಡಿಎ ಎಂದರೆ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ ಸಾಮಾಜಿಕ ಒಕ್ಕೂಟ. ಶಿಕ್ಷಣ ಕ್ಷೇತ್ರದಲ್ಲಿ ಉಚಿತ ಶಿಕ್ಷಣ ನೀಡುವುದು ಹಾಗೂ ಮುಚ್ಚಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯುವುದಾಗಿ ಪಕ್ಷ ಭರವಸೆ ನೀಡಿದೆ. ಅಲ್ಲದೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಾಮಿತ್ರರಿಗೆ ವೇತನ ಹೆಚ್ಚಳ ಮತ್ತು ಕಾಯಂ ಉದ್ಯೋಗ ನೀಡುವ ಭರವಸೆಯನ್ನೂ ನೀಡಿದೆ.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ವೈಫೈ, ಬೀದಿದೀಪ, ವಿದ್ಯುತ್ ಸಂಪರ್ಕ ಮತ್ತು ಪಕ್ಕಾ ರಸ್ತೆಗಳನ್ನು ಹೊಂದಿರುವ ಹೊಸ ಗ್ರಾಮಗಳನ್ನು ನಿರ್ಮಿಸುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಉದ್ಯೋಗ ಸೃಷ್ಟಿಯ ಭರವಸೆಯನ್ನು ಸಮರ್ಥಿಸಿಕೊಳ್ಳಲು ಅಖಿಲೇಶ್ ಯಾದವ್ ತಮ್ಮ ಹಿಂದಿನ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ. 2012ರಿಂದ 2017ರವರೆಗಿನ ತಮ್ಮ ಸರ್ಕಾರದ ಅವಧಿಯಲ್ಲಿ ಲಕ್ನೋಗೆ ಹೆಚ್ಸಿಎಲ್ ಕಂಪನಿಯನ್ನು ಕರೆತಂದಿದ್ದು, ಉದ್ಯೋಗ ಸೃಷ್ಟಿಗಾಗಿ ಐಟಿ ಸಿಟಿ ನಿರ್ಮಿಸಿದ್ದಾಗಿ ತಿಳಿಸಿದ್ದಾರೆ.
ಇನ್ನು ಪ್ರಣಾಳಿಕೆಯಲ್ಲಿ ಉಚಿತ ಆರೋಗ್ಯ ಸೇವೆ, ಅಂಬುಲೆನ್ಸ್ ಸೌಲಭ್ಯ, ಪೊಲೀಸ್ ವ್ಯವಸ್ಥೆಯಲ್ಲಿ ಎಐ ತಂತ್ರಜ್ಞಾನದ ಬಳಕೆ, ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಹಾಗೂ ತ್ವರಿತ ನ್ಯಾಯಕ್ಕಾಗಿ ಫಾಸ್ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆಯ ಭರವಸೆ ನೀಡಲಾಗಿದೆ. ಇದರ ಜೊತೆಗೆ ಹಳೆಯ ಪಿಂಚಣಿ ಯೋಜನೆ ಮರುಜಾರಿಗೆ ತರುವುದಾಗಿಯೂ ಪಕ್ಷ ಘೋಷಿಸಿದೆ.
ಮಹಿಳೆಯರಿಗಾಗಿ ವರ್ಷಕ್ಕೆ 40,000 ರೂ. ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಲಾಗಿದೆ. ರಾಜ್ಯದ ಗೌರವ ಪ್ರಶಸ್ತಿಯಾದ ಯಶ್ ಭಾರತಿ ಪ್ರಶಸ್ತಿಯನ್ನು ಮತ್ತೆ ಜಾರಿಗೆ ತರುವುದಾಗಿಯೂ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ರಾಜ್ಯಮಟ್ಟದ ಪ್ರಣಾಳಿಕೆಯ ಜೊತೆಗೆ ಪ್ರತಿ ಜಿಲ್ಲೆಯ ಪ್ರತ್ಯೇಕ ಪ್ರಣಾಳಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ. ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ಹಾಗೂ ಮಹಿಳೆಯರನ್ನು ಉದ್ದೇಶಿಸಿ `ಆಧಿ ಆಬಾದಿ’ ಹೆಸರಿನ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದಾರೆ.
ತಮ್ಮ ಪಕ್ಷ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಿಗಿಂತ ಹೆಚ್ಚಿನ ಕೆಲಸಗಳನ್ನು ಮಾಡಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಕ್ನೋ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಮೆಡಾಂಟಾ ಸಿಟಿ, ಮೆಡಾಂಟಾ ಆಸ್ಪತ್ರೆ, ವಿಶ್ವಮಟ್ಟದ ಕ್ರೀಡಾಂಗಣ, ಲುಲು ಮಾಲ್ ಮತ್ತು ರಿವರ್ಫ್ರಂಟ್ ನಿರ್ಮಾಣದಂತಹ ಕೆಲಸಗಳನ್ನು ಪ್ರಣಾಳಿಕೆಯಲ್ಲಿ ಉಲ್ಲೇಖಿಸದಿದ್ದರೂ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸಂವಿಧಾನ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ದೇಶವು ಸಂವಿಧಾನದ ಆಧಾರದ ಮೇಲೆ ನಡೆಯಬೇಕೇ ಹೊರತು ವ್ಯಕ್ತಿಗಳ ಇಚ್ಛೆಯಂತೆ ಅಲ್ಲ ಎಂದು ಹೇಳಿದ್ದಾರೆ. ಸಂವಿಧಾನಕ್ಕೆ ತಪ್ಪಾದ ತಿದ್ದುಪಡಿಗಳನ್ನು ತರುವ ಯಾವುದೇ ಪ್ರಯತ್ನದ ವಿರುದ್ಧ ಪಿಡಿಎ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದುವರೆಗೆ ಪಿಡಿಎ ಇತರ ಪಕ್ಷಗಳ ಸರ್ಕಾರ ರಚನೆಗೆ ಸಹಕಾರ ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಪಿಡಿಎ ತನ್ನದೇ ಆದ ಸರ್ಕಾರ ರಚಿಸಲಿದೆ. ಶೋಷಣೆಗೆ ಒಳಗಾದ ಪ್ರತಿಯೊಬ್ಬರೂ ಪಿಡಿಎ ಭಾಗವಾಗಿದ್ದಾರೆ ಎಂದರು.
ಇದೇ ವೇಳೆ, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ ಮತ್ತು ಅದರ ಮಿತ್ರಪಕ್ಷ ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಮಾತುಕತೆ ನಡೆಯುತ್ತಿರುವ ನಡುವೆಯೇ ಸಮಾಜವಾದಿ ಪಕ್ಷ ಮಂಗಳವಾರ ಐದು ಅಭ್ಯರ್ಥಿಗಳ ಹೆಸರನ್ನು ಘೋಷಿಸಿತ್ತು.
Laxmi News 24×7