Breaking News

40 ಕೋಟಿ ವೆಚ್ಚದ ಮದುವೆಯಲ್ಲಿ ಅನ್ನಕ್ಕೂ ಕಿತ್ತಾಟ: ಔತಣಕೂಟಕ್ಕೆ ಬಂದವರ ಮೇಲೆ ಲಾಠಿ ಚಾರ್ಜ್, ಪಲ್ಯದ ಪಾತ್ರೆಯೊಳಗೆ ಬಿದ್ದ ವ್ಯಕ್ತಿ

Spread the love

ಪಾಟ್ನಾ: ಬಿಹಾರದ ಮೊಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಮಗಳ ಮದುವೆ  ಈಗ ಇಡೀ ದೇಶದಲ್ಲೇ ಸಖತ್ ಸುದ್ದಿಯಾಗಿದೆ. ನವೆಂಬರ್ 25ರಂದು ಪಾಟ್ನಾ ಜಿಲ್ಲೆಯ ನದ್ವಾನ್ ಗ್ರಾಮದಲ್ಲಿ ನಡೆದ ಪುತ್ರಿ ಶಿವಾಂಗಿ ವಿವಾಹಕ್ಕೆ ಬರೋಬ್ಬರಿ 4 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಭರ್ಜರಿ ಔತಣಕೂಟ ನಡೆಯಬೇಕಿದ್ದ ಜಾಗದಲ್ಲಿ ಜನಸಂದಣಿ ನಿಯಂತ್ರಣ ತಪ್ಪಿ ದೊಡ್ಡ ಅವ್ಯವಸ್ಥೆ ಸೃಷ್ಟಿಯಾಗಿದೆ.

ರಟ್ಟಿನ ತುಂಡುಗಳಲ್ಲೆ ಜನರ ಊಟ
ಮದುವೆಗೆ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದುಬಂದಿತ್ತು. ಊಟದ ಕೌಂಟರ್‌ಗಳ ಬಳಿ ಎಷ್ಟು ನೂಕುನುಗ್ಗಲು ಇತ್ತೆಂದರೆ, ಬಡಿಸುವವರು ತಟ್ಟೆಗಳನ್ನು ಕ್ಯಾಚ್-ಕ್ಯಾಚ್ ಆಟದಂತೆ ಜನರ ಗುಂಪಿನ ಮೇಲೆ ಎಸೆಯುತ್ತಿದ್ದರು. ತಟ್ಟೆ ಹಿಡಿಯಲು ಜನರು ಒಬ್ಬರ ಮೇಲೊಬ್ಬರು ಬೀಳುತ್ತಿದ್ದ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇನ್ನು ತಟ್ಟೆ ಸಿಗದವರು ಕೈಗೆ ಸಿಕ್ಕ ರಟ್ಟಿನ ತುಂಡುಗಳು ಮತ್ತು ಪೇಪರ್‌ಗಳ ಮೇಲೇ ಪೂರಿ, ಮಟರ್ ಪನೀರ್ ಹಾಕಿಕೊಂಡು ತಿಂದಿದ್ದಾರೆ.

Anant Singhs Daughters Royal Wedding 8

ತಟ್ಟೆಗಾಗಿ ಕಿತ್ತಾಟ, ಆಹಾರಕ್ಕೆ ಬಡಿದಾಟ
ಅಷ್ಟೇ ಅಲ್ಲ, ಜನರನ್ನು ನಿಯಂತ್ರಿಸಲು ಅಲ್ಲಿ ಲಾಠಿ ಕೂಡ ಬೀಸಲಾಗಿದೆ. ಕೆಲವರು ನೇರವಾಗಿ ಪಾತ್ರೆಗಳಿಂದಲೇ ಪನೀರ್ ತುಂಡುಗಳನ್ನು ಬಾಚಿಕೊಂಡರೆ, ಮತ್ತೊಂದು ವಿಡಿಯೋದಲ್ಲಿ ತಳ್ಳಾಟದ ನಡುವೆ ವ್ಯಕ್ತಿಯೊಬ್ಬ ಪಲ್ಯ ತುಂಬಿದ್ದ ದೊಡ್ಡ ಪಾತ್ರೆಯೊಳಗೇ ಬಿದ್ದಿರುವ ವಿಡಿಯೋ ವೈರಲ್‌ ಆಗುತ್ತಿದೆ. ಇಲ್ಲಿ ಊಟ ಸಿಗೋದು ಯುದ್ಧ ಗೆದ್ದಂತೆ, ರಸಗುಲ್ಲಾ ಎಲ್ಲಾ ಲೂಟಿಯಾಗಿ ಹೋಗಿದೆ ಅಂತ ಅತಿಥಿಯೊಬ್ಬರು ಹೇಳಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಭರ್ಜರಿ ಔತಣಕೂಟಕ್ಕಾಗಿ 300ಕ್ಕೂ ಹೆಚ್ಚು ಅಡುಗೆ ಕೇಂದ್ರಗಳನ್ನು ತೆರೆದು 500 ಬಾಣಸಿಗರನ್ನು ಕರೆಸಲಾಗಿತ್ತು. 8 ಬಗೆಯ ಸ್ವೀಟ್ಸ್, ಲಿಟ್ಟಿ-ಚೋಖಾ, ದೋಸೆ, ಕಾಶ್ಮೀರಿ ಪುಲಾವ್ ಸೇರಿದಂತೆ ಭರ್ಜರಿ ಮೆನು ಸಿದ್ಧವಾಗಿತ್ತು. ಆದರೆ, 10 ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್‌ನಿಂದಾಗಿ ಸ್ಪೀಕರ್ ಪ್ರೇಮ್ ಕುಮಾರ್ ಸೇರಿದಂತೆ ಹಲವು ವಿಐಪಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡರು. ಜನಸಂದಣಿ ಹೆಚ್ಚಾದ ಕಾರಣ ಕುದುರೆ ರೇಸ್ ಅನ್ನು ಕೂಡ ಅರ್ಧಕ್ಕೇ ನಿಲ್ಲಿಸಬೇಕಾಯಿತು.

ಶಾಸಕನ ವಿರುದ್ಧ ನೆಟ್ಟಿಗರು ಗರಂ
ಸದ್ಯ ಈ ವಿಡಿಯೋಗಳನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 40 ಕೋಟಿ ರೂ. ಖರ್ಚು ಮಾಡಿರುವ ಮದುವೆಯಲ್ಲಿ ಲಕ್ಷಾಂತರ ಜನರನ್ನು ಕರೆಯುವ ತಾಕತ್ತಿದ್ದರೆ, ಅವರಿಗೆ ಗೌರವಯುತವಾಗಿ ಊಟ ಹಾಕುವ ಜವಾಬ್ದಾರಿಯೂ ಇರಬೇಕು. ಇದು ಅನ್ನದಾನವಲ್ಲ, ಕೇವಲ ಸಂಪತ್ತು ಮತ್ತು ಅಧಿಕಾರದ ಪ್ರದರ್ಶನ ಎಂದು ನೆಟ್ಟಿಗರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಹೃದಯಾಘಾತಕ್ಕೆ LLB ವಿದ್ಯಾರ್ಥಿ ಬಲಿ

Spread the loveಧಾರವಾಡ: ಹೃದಯಾಘಾತದಿಂದ  ಎಲ್‌ಎಲ್‌ಬಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ  ನಡೆದಿದೆ. ಸಮರ್ಥ್ ದೇಶಪಾಂಡೆ (22) ಮೃತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ