Breaking News

ಒಂದು ತಿಂಗಳು ಕಳೆದರೆ ಹಸೆಮಣೆ ಏರಬೇಕಿದ್ದ ಯುವತಿ ನೇಣಿಗೆ ಶರಣು; ಕೊರಳಲ್ಲಿ ತಾಳಿ ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು

Spread the love

ಬೆಂಗಳೂರು: ಮದುವೆಗೆ ಒಂದು ತಿಂಗಳು ಬಾಕಿ ಇರುವಾಗಲೇ ಯುವತಿ ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ನಗರದ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಭೂಮಿಕಾ (24) ಆತ್ಮಹತ್ಯೆಗೆ ಶರಣಾದ ಯುವತಿ. ಬ್ಲ್ಯಾಕ್‌ಮೇಲ್‌ಗೆ ಹೆದರಿ ಮಗಳು ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಇನ್ನೊಂದು ತಿಂಗಳು ಕಳೆದಿದ್ದರೆ ಆ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಬೇಕಿತ್ತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಹಸೆಮಣೆ ಏರಬೇಕಿದ್ದ ಮಗಳ ಮೃತದೇಹವನ್ನು ಪೆಂಡಾಲ್ ಕೆಳಗೆ ಮಲಗಿಸಿ ಪೋಷಕರು ಕಣ್ಣೀರು ಹಾಕುವಂತಾಗಿದೆ.

ಭೂಮಿಕಾ ಮುಂದಿನ ತಿಂಗಳು ತನ್ನ ಬಾಲ್ಯದ ಗೆಳೆಯ ಕಿರಣ್ ಎಂಬುವವರ ಜೊತೆ ಸಪ್ತಪದಿ ತುಳಿಯಬೇಕಿತ್ತು. ಮನೆಯಲ್ಲಿ ಮದುವೆ ತಯಾರಿ ಜೋರಾಗಿ ನಡೆಯುತ್ತಿತ್ತು. ಆದರೆ, ಮೊನ್ನೆ ಇದ್ದಕ್ಕಿದ್ದಂತೆ ಗೌತಮ್ ಎಂಬ ಯುವಕ ಕರೆ ಮಾಡಿ, ಭೂಮಿಕಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ, ಮನೆಯಲ್ಲಿ ಯಾರೂ ಇಲ್ಲವಂತೆ ಬೇಗ ನೋಡಿ ಎಂದು ಹೇಳಿದ್ದಾನೆ. ಗಾಬರಿಯಾದ ಕುಟುಂಬಸ್ಥರು ತಕ್ಷಣ ಮನೆಗೆ ಬಂದು ಬಾಗಿಲು ಮುರಿದು ಒಳಹೋಗಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲಾಗಲೇ ಭೂಮಿಕಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮದುವೆಗೂ ಮುನ್ನ ಕೊರಳಲ್ಲಿ ಅರಿಶಿನ ಕೊಂಬಿನ ತಾಳಿ
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದಾಗ ಕುಟುಂಬಸ್ಥರಿಗೆ ಮತ್ತೊಂದು ಶಾಕ್ ಕಾದಿತ್ತು. ಮದುವೆಗೂ ಮುನ್ನವೇ ಭೂಮಿಕಾಳ ಕೊರಳಲ್ಲಿ ಅರಿಶಿನ ಕೊಂಬಿನ ತಾಳಿ ಕಂಡುಬಂದಿದೆ. ಇತ್ತೀಚೆಗೆ ಕಾಲೇಜು ಟ್ರಿಪ್ ಹೋಗಿ ಬಂದಾಗಿನಿಂದ ಭೂಮಿಕಾ ಯಾರೊಂದಿಗೂ ಸರಿಯಾಗಿ ಮಾತನಾಡದೆ, ನನಗೆ ತುಂಬಾ ಹಿಂಸೆಯಾಗುತ್ತಿದೆ ಎಂದು ಅಜ್ಜಿಯ ಬಳಿ ಹೇಳಿಕೊಂಡು ರಾತ್ರಿಯಿಡೀ ಫೋನ್‌ನಲ್ಲಿ ಮಾತನಾಡುತ್ತಾ ಅಳುತ್ತಿದ್ದಳಂತೆ.

ಫೋನ್ ಕಾಲ್ ಡಿಟೈಲ್ಸ್ ಪರಿಶೀಲಿಸಿದಾಗ ಗೌತಮ್ ಜೊತೆ ಭೂಮಿಕಾ ಹಲವು ಬಾರಿ ಮಾತನಾಡಿರುವುದು ಗೊತ್ತಾಗಿದೆ. ಆತನೇ ಭೂಮಿಕಾಳ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ಪೋಷಕರು ದೂರಿದ್ದಾರೆ. ಸದ್ಯ ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಗೌತಮ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭೂಮಿಕಾ ಸಾವಿಗೆ ನಿಖರ ಕಾರಣವೇನು ಹಾಗೂ ಆಕೆಯ ಕೊರಳಿಗೆ ತಾಳಿ ಕಟ್ಟಿದ್ದು ಯಾರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.


Spread the love

About Laxminews 24x7

Check Also

ಹೃದಯಾಘಾತಕ್ಕೆ LLB ವಿದ್ಯಾರ್ಥಿ ಬಲಿ

Spread the loveಧಾರವಾಡ: ಹೃದಯಾಘಾತದಿಂದ  ಎಲ್‌ಎಲ್‌ಬಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ  ನಡೆದಿದೆ. ಸಮರ್ಥ್ ದೇಶಪಾಂಡೆ (22) ಮೃತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ