Breaking News

ಬಿಹಾರ ಶಾಸಕನ ಪುತ್ರಿಯ ಅದ್ಧೂರಿ ವಿವಾಹಕ್ಕೆ ಜನಸಾಗರ: 10 ಕಿ.ಮೀ. ಟ್ರಾಫಿಕ್ ಜಾಮ್!

Spread the love

ಪಾಟ್ನಾ: ಮದುವೆ ಸಂಭ್ರಮಕ್ಕೆ ಲಕ್ಷಾಂತರ ಜನರು ಹರಿದುಬಂದರೆ ಏನಾಗಬಹುದು? ಬಿಹಾರದ ಪ್ರಭಾವಿ ರಾಜಕಾರಣಿ, ಮೊಕಾಮಾ ಶಾಸಕ ಅನಂತ್ ಸಿಂಗ್  ಪುತ್ರಿ ಶಿವಾಂಗಿ ಸಿಂಗ್ ಅವರ ಅದ್ಧೂರಿ ವಿವಾಹ ಮಹೋತ್ಸವ ಇದಕ್ಕೆ ಸಾಕ್ಷಿಯಾಗಿದೆ. ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದುಬಂದ ಪರಿಣಾಮ ಪಾಟ್ನಾ ಜಿಲ್ಲೆಯ ನದವಾನ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಬರೋಬ್ಬರಿ 10 ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್  ಉಂಟಾಗಿ, ಇಡೀ ಪ್ರದೇಶವೇ ಜನಜಂಗುಳಿಯಿಂದ ಸ್ತಬ್ಧಗೊಂಡಿತ್ತು.

ಬುಧವಾರ ನಡೆದ ಈ ಅದ್ಧೂರಿ ವಿವಾಹಕ್ಕೆ ಬಿಹಾರ ಮತ್ತು ಜಾರ್ಖಂಡ್‌ನ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದರು. ಇದರಿಂದಾಗಿ ನದವಾನ್ ಗ್ರಾಮಕ್ಕೆ ಹೋಗುವ ದ್ವಿಪಥ ರಸ್ತೆ ಹಾಗೂ ಬೇಗುಸರಾಯ್-ಪಾಟ್ನಾ ಚತುಷ್ಪಥ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿತ್ತು.

ಜನಸಂದಣಿ ನಿಯಂತ್ರಣ ಮೀರಿದ ಪರಿಣಾಮ ಸಂಭ್ರಮದ ವಾತಾವರಣವು ಆತಂಕಕ್ಕೆ ತಿರುಗಿದ್ದು, ವಿವಾಹದ ಪ್ರಮುಖ ಆಕರ್ಷಣೆಯಾಗಿದ್ದ ಕುದುರೆ ರೇಸ್‌ನ ಅಂತಿಮ ಸುತ್ತನ್ನು ಆಯೋಜಕರು ಮುಂದೂಡಬೇಕಾಯಿತು.

‘ಛೋಟೆ ಸರ್ಕಾರ್’ ಅಥವಾ ‘ದಾದಾ’ ಎಂದೇ ಖ್ಯಾತರಾಗಿರುವ ಅನಂತ್ ಸಿಂಗ್, ತಮ್ಮ ಮಗಳ ಮದುವೆಗೆ ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದರು. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಕುದುರೆ ರೇಸ್ ವಿಜೇತರಿಗೆ ಮಹೀಂದ್ರಾ ಥಾರ್  ಕಾರನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಈ ರೇಸ್ ವೀಕ್ಷಿಸಲು ಜನರು ವಿದ್ಯುತ್ ಟವರ್‌ಗಳನ್ನು ಏರಿ ಕುಳಿತಿದ್ದ ದೃಶ್ಯಗಳು ಕಂಡುಬಂದವು.

ಈ ವಾರದ ಆರಂಭದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮದುವೆ ಸಿದ್ಧತೆಗಳಿಗೆ ಕೊಂಚ ಅಡಚಣೆಯಾಗಿತ್ತು. ಆದರೆ ಬುಧವಾರ ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ಪರಿಸ್ಥಿತಿ ಕೈಮೀರಿತು. ಮದುವೆಗೆ ಹೋಗುವವರು ಮತ್ತು ವಾಪಸ್ ಬರುವವರು ಒಂದೇ ರಸ್ತೆಯಲ್ಲಿ ಜಮಾಯಿಸಿದ್ದರಿಂದ ವಾಹನಗಳು ಹಾಗೂ ಪಾದಚಾರಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.

ನದವಾನ್‌ನಿಂದ 5 ಕಿ.ಮೀ ದೂರದಲ್ಲೇ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಶೇಷವೆಂದರೆ, ಅನಂತ್ ಸಿಂಗ್ ಅವರ ಶಾಸಕ ಸ್ಥಾನದ ಭವಿಷ್ಯ ನಿರ್ಧರಿಸಲಿರುವ ಬಿಹಾರ ವಿಧಾನಸಭೆಯ ಸ್ಪೀಕರ್ ಪ್ರೇಮ್ ಕುಮಾರ್ ಅವರ ಬೆಂಗಾವಲು ಪಡೆ ಕೂಡ ಇದೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿತು.

ರಸ್ತೆಗಳು ಸಂಪೂರ್ಣ ಬಂದ್ ಆಗಿರುವುದರಿಂದ, ಪಶ್ಚಿಮ ಪಾಟ್ನಾದ ದಾನಾಪುರದಿಂದ ಹೊರಟಿರುವ ವರ ಹೃಷಿಕೇಶ್ ಕುಮಾರ್ ಅವರ ದಿಬ್ಬಣ ಮದುವೆ ಮಂಟಪ ತಲುಪುವುದೇ ದೊಡ್ಡ ಸವಾಲಾಗಿದೆ. ಉತ್ತರ ಪ್ರದೇಶದ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಒಂದೆಡೆ ಮಗಳ ಅದ್ಧೂರಿ ಮದುವೆಯ ಸಂಭ್ರಮವಿದ್ದರೆ, ಇನ್ನೊಂದೆಡೆ ಅನಂತ್ ಸಿಂಗ್ ಸಾಲು ಸಾಲು ರಾಜಕೀಯ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ನೀರಜ್ ಕುಮಾರ್ ವಿರುದ್ಧ ‘ಜನ್ ಸುರಾಜ್’ ಅಭ್ಯರ್ಥಿ ಅನುಜ್ ಕುಮಾರ್ ಸಿಂಗ್ ಪರ ಪ್ರಚಾರ ನಡೆಸಿದ ಕಾರಣಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವು ಅನಂತ್ ಸಿಂಗ್ ಮತ್ತು ಅವರ ಪತ್ನಿ, ಮಾಜಿ ಶಾಸಕಿ ನೀಲಂ ದೇವಿ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸುವಂತೆ ಜೆಡಿಯು ಕೋರಿದ್ದು, ನವೆಂಬರ್ 2ರಂದು ವಿಧಾನಸಭೆ ಸಚಿವಾಲಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

2025ರ ಅಕ್ಟೋಬರ್‌ನಲ್ಲಿ ನಡೆದಿದ್ದ ಜನ್ ಸುರಾಜ್ ಬೆಂಬಲಿಗ ದುಲಾರ್‌ಚಂದ್ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 30ರಂದು ಅನಂತ್ ಸಿಂಗ್ ಅವರ ಜಾಮೀನನ್ನು ರದ್ದುಗೊಳಿಸಿದೆ. ಅಲ್ಲದೆ ಡಿಸೆಂಬರ್ 1ರೊಳಗೆ ನ್ಯಾಯಾಲಯಕ್ಕೆ ಶರಣಾಗುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. 2025ರ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಅನಂತ್ ಸಿಂಗ್ ಗೆಲುವು ಸಾಧಿಸಿದ್ದರು.


Spread the love

About Laxminews 24x7

Check Also

ಹೋಟೆಲ್‌ನಲ್ಲಿ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ – ಎನ್‌ಕೌಂಟರ್‌ ನಡೆಸಿ ಕಾಮುಕನ ಬಂಧನ

Spread the loveಲಕ್ನೋ: ಉತ್ತರ ಪ್ರದೇಶದ ಮಿರತ್‌ನ ಹೋಟೆಲ್ ಒಂದರಲ್ಲಿ ದಲಿತ ಮಹಿಳೆಯನ್ನು ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ