Breaking News

ಇನ್ಶೂರೆನ್ಸ್ ಹಣದ ಆಸೆಗೆ ಪತಿಯನ್ನೇ ಕೊಂದ ಪತ್ನಿ – ಮೂವರು ಅರೆಸ್ಟ್‌

Spread the love

ಕೊಪ್ಪಳ: ಮನೆ ನಿರ್ಮಾಣಕ್ಕೆ ಮಾಡಿದ್ದ ಸಾಲ ಮನ್ನಾ ಆಗುತ್ತದೆ ಹಾಗೂ ವಿಮೆ ಹಣ ಕೈ ಸೇರುತ್ತದೆ ಎಂಬ ತಪ್ಪು ಮಾಹಿತಿ ನಂಬಿ ಪತ್ನಿಯೇ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್‌ನಲ್ಲಿ ನಡೆದಿದೆ.

ಕಾರಟಗಿ ತಾಲೂಕಿನ ಮುಸ್ಟೂರು ಕ್ಯಾಂಪ್ ನಿವಾಸಿ ರಾಘವೇಂದ್ರ ಹನುಮಂತಪ್ಪ ಸಾಳುಂಕೆ (38) ಕೊಲೆಯಾದ ವ್ಯಕ್ತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಉಮಾ, ಆಕೆಯ ಸಂಬಂಧಿ ಶಿವಾಜಿ ಹಾಗೂ ಶಿವಾಜಿಯ ಸ್ನೇಹಿತ ಖಲೀಲ್‌ನನ್ನು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

18 ಲಕ್ಷ ಸಾಲವೇ ಕೊಲೆಗೆ ಕಾರಣ: ರಾಘವೇಂದ್ರ ಮತ್ತು ಉಮಾ ದಂಪತಿ ಮನೆ ನಿರ್ಮಾಣಕ್ಕಾಗಿ ವಿವಿಧ ಸ್ತ್ರೀಶಕ್ತಿ ಸಂಘಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸುಮಾರು 18 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಸಾಲದ ಕಂತು ಪಾವತಿಸಲಾಗದೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ನಡುವೆ ಪತಿ ಮೃತಪಟ್ಟರೆ ವಿಮೆ ಹಣ ಸಿಗುತ್ತದೆ ಹಾಗೂ ಸಾಲ ಮನ್ನಾ ಆಗುತ್ತದೆ ಎಂಬ ತಪ್ಪು ಮಾಹಿತಿಯನ್ನು ಉಮಾ ನಂಬಿದ್ದಳು. ಇದೇ ಕಾರಣಕ್ಕೆ ಕೊಲೆ ಮಾಡಿಸಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ.

ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿದ್ದ ಪತ್ನಿ: ಪತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಉಮಾ ಸುಮಾರು ಒಂದು ವಾರ ಅನ್ನದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದಳು ಎನ್ನಲಾಗಿದೆ. ಇದರಿಂದ ಉದ್ದೇಶ ಈಡೇರದೇ ಇರುವುದರಿಂದ ಗಂಗಾವತಿಯಲ್ಲಿದ್ದ ಸಂಬಂಧಿ ಶಿವಾಜಿ‌ ಯನ್ನು ಸಂಪರ್ಕಿಸಿ, ಪತಿಯನ್ನು ಕೊಲೆ ಮಾಡಿದರೆ ಹೊಸ ಸ್ಕೂಟಿ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಬಳಿಕ ಶಿವಾಜಿ ತನ್ನ ಸ್ನೇಹಿತ ಖಲೀಲ್‌ನನ್ನು ಕೃತ್ಯಕ್ಕೆ ಸೇರಿಸಿಕೊಂಡಿದ್ದ.

ಮಕ್ಕಳಿಗೂ ಜೀವ ಬೆದರಿಕೆ: ಅ.6ರ ರಾತ್ರಿ ಶಿವಾಜಿ ಮತ್ತು ಖಲೀಲ್ ಮುಸ್ಟೂರು ಕ್ಯಾಂಪ್‌ನ ರಾಘವೇಂದ್ರನ ಮನೆಗೆ ಬಂದಿದ್ದರು. ಎಲ್ಲರೂ ಮಲಗಿದ ಬಳಿಕ ಮಧ್ಯರಾತ್ರಿ ಸುಮಾರು 12 ಗಂಟೆಗೆ ಉಮಾ ಮತ್ತು ಶಿವಾಜಿ ಸೇರಿ ನಿದ್ರೆಯಲ್ಲಿದ್ದ ರಾಘವೇಂದ್ರನ ಕುತ್ತಿಗೆಗೆ ಹಗ್ಗ ಬಿಗಿದು, ಕಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದರು. ತಂದೆಯ ಚೀರಾಟ ಕೇಳಿ ಎಚ್ಚರಗೊಂಡ ಮಕ್ಕಳಿಗೆ ಜೀವ ಬೆದರಿಕೆ ಹಾಕಿ ಸುಮ್ಮನಿರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಹಲ್ಲೆಯ ಬಳಿಕವೂ ರಾಘವೇಂದ್ರ ಮೃತಪಟ್ಟಿರಲಿಲ್ಲ. ನಂತರ ಆರೋಪಿಗಳು ಆತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸುಮಾರು ಐದು ಕಿಲೋಮೀಟರ್ ದೂರದ ಹೆಬ್ಬಾಳ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅಪಘಾತದಂತೆ ಬಿಂಬಿಸುವ ಉದ್ದೇಶದಿಂದ ಬಾಯಿಗೆ ಕೀಟನಾಶಕ ಸುರಿದು ರಸ್ತೆಯಲ್ಲಿ ಬಿಟ್ಟು ಪರಾರಿ ಯಾಗಿದ್ದರು.

ಮರುದಿನ ಬೆಳಗ್ಗೆ ಹೊಲಕ್ಕೆ ತೆರಳುತ್ತಿದ್ದ ರೈತರು ರಾಘವೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪತ್ನಿ ಉಮಾ, ಅಪಘಾತ ಅಥವಾ ಫಿಟ್ಸ್‌ನಿಂದ ಘಟನೆ ಸಂಭವಿಸಿರಬಹುದು ಎಂದು ಹೇಳಿದ್ದಳು ಎಂದು ತಿಳಿದುಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಬಿಜೆಪಿಯ ಬಿಎಲ್ಎಗಳ ಮೇಲೆ ಎಫ್ಐಆರ್‌; ಹೈಕೋರ್ಟ್‌ನಿಂದ ಮಧ್ಯಂತರ ತಡೆ

Spread the loveಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಸಮಗ್ರ ಪರಿಷ್ಕರಣೆ  ಪ್ರಕ್ರಿಯೆಯಲ್ಲಿ, ಫಾರ್ಮ್ 7 ಸಲ್ಲಿಕೆಗೆ ಸಂಬಂಧಿಸಿದಂತೆ ಬಿಜೆಪಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ