Breaking News

ಆಂಧ್ರದ ಚಿತ್ತೂರಲ್ಲಿ ಹಕ್ಕಿ ಜ್ವರ ಪತ್ತೆ – ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ನಿಗಾ

Spread the love

ಕೊಪ್ಪಳ: ನರೆಯ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕೋಳಿ ಹಕ್ಕಿ ಜ್ವರ  ಪ್ರಕರಣ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ್ ಸೂಚನೆ ನೀಡಿದರು.

ಕೊಪ್ಪಳ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಕೋಳಿ ಶೀತ ಜ್ವರದ ರೋಗೋದ್ರೇಕದ ಕುರಿತು ಮುಂಜಾಗ್ರತೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಣಿ ಜನ್ಯ ರೋಗಗಳ ತುರ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈ ವೇಳೆ, ಕೋಳಿ ಫಾರಂ ಮಾಲೀಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 25 ಮೊಟ್ಟೆ ಉತ್ಪಾದನಾ ಕೋಳಿ ಫಾರಂಗಳು ಹಾಗೂ 14 ಮಾಂಸ ಉತ್ಪಾದನಾ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿದ್ದು, ಕೋಳಿ ಶೀತ ಜ್ವರ ಹರಡುವಿಕೆ ತಡೆಯಲು ತೀವ್ರ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಪಕ್ಕದ ರಾಜ್ಯದಲ್ಲಿ ರೋಗೋದ್ರೇಕ ಕಂಡುಬಂದಿರುವುದರಿಂದ, ಜಿಲ್ಲೆಯ ಪಶುವೈದ್ಯಕೀಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಹಾಗೂ ಕೋಳಿ ಫಾರಂ ಮಾಲೀಕರು ಪೂರ್ಣ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕೋಳಿಗಳಲ್ಲಿ ಅಸಹಜ ಸಾವಿನ ಪ್ರಕರಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ರೋಗಪೀಡಿತ ಕೋಳಿಗಳನ್ನು ಆರೋಗ್ಯಕರ ಕೋಳಿಗಳಿಂದ ಬೇರ್ಪಡಿಸುವುದು ಮತ್ತು ಸತ್ತ ಕೋಳಿಗಳನ್ನು ಸುರಕ್ಷಿತವಾಗಿ ಹೂತು ಹಾಕುವ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಜನವಸತಿ ಪ್ರದೇಶದಿಂದ ಕೋಳಿ ಫಾರಂಗಳನ್ನು ದೂರವಿಡುವುದು ಹಾಗೂ ಜನರು ಕೋಳಿ ಮತ್ತು ಅದರ ಉತ್ಪನ್ನಗಳನ್ನು ಮುಟ್ಟಿದ ನಂತರ ಸಾಬೂನಿನಿಂದ ಕೈ ತೊಳೆಯುವುದು ಅತ್ಯಂತ ಮುಖ್ಯವಾಗಿದೆ.

ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ 70 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ ಸೇವಿಸುವುದರಿಂದ ಯಾವುದೇ ಸೋಂಕಿನ ಅಪಾಯ ತಪ್ಪಿಸಬಹುದು. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೊಳಗಾಗದೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದರು.‌

ಗ್ರಾಮಗಳಲ್ಲಿ ಕೋಳಿಗಳು ಅಥವಾ ವಲಸೆ ಪಕ್ಷಿಗಳು ಅಸಹಜವಾಗಿ ಸತ್ತರೆ ತಕ್ಷಣವೇ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕೆರೆ, ಕಟ್ಟೆ, ನದಿ ಹಾಗೂ ನೀರಿನ ತೊರೆಗಳಲ್ಲಿ ಸತ್ತ ಪಕ್ಷಿಗಳು ಕಂಡುಬಂದರೆ ಕೂಡಲೇ ವರದಿ ಮಾಡಬೇಕು ಎಂದು ಅವರು ತಿಳಿಸಿದರು. ಗ್ರಾಮ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಿದ್ದು, ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.

ಹಕ್ಕಿ ಜ್ವರ ಅನುಮಾನ ಉಂಟಾದಲ್ಲಿ 24 ಗಂಟೆಗಳೊಳಗೆ ಪಶುವೈದ್ಯರ ತಂಡಗಳನ್ನು ರಚಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಹಿಕ್ಕೆ, ರಕ್ತ ಹಾಗೂ ಸತ್ತ ಕೋಳಿಗಳ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗ ಸಂಶೋಧನಾ ಸಂಸ್ಥೆಗೆ ಕಳುಹಿಸಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.


Spread the love

About Laxminews 24x7

Check Also

ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

Spread the love ಕೊಪ್ಪಳ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದಕ್ಕಾಗಿ ಭಾರತ ಧ್ವಜ ಇರೋ ಹಡುಗಗಳು ಸುರಕ್ಷಿತವಾಗಿ ನಮ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ