Breaking News

ನನ್ನನ್ನು ವಿಚಾರಣೆ ಮಾಡಲು ಅವರ್ಯಾರು? ಮೊದಲು ಮೊಬೈಲ್ ವಶಕ್ಕೆ ಪಡೆಯಲಿ – ಸೈಬರ್‌ ಕ್ರೈಂ ನೋಟಿಸ್‌ಗೆ ಹೆಚ್‌ಡಿಕೆ ಕಿಡಿ

Spread the love

ನವದೆಹಲಿ: ಹಾಸನ ಸೈಬರ್ ಕ್ರೈಂ ಪೊಲೀಸರು ತಮಗೆ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಆರೋಪವಲ್ಲ, ತನಿಖೆ ಮಾಡಿ ಎಂದಷ್ಟೇ ಹೇಳಿದ್ದೆ. ನನಗೆ ನೋಟಿಸ್ ಕೊಡಲು ಮತ್ತು ನನ್ನನ್ನು ವಿಚಾರಣೆ ಮಾಡಲು ಅವರ್ಯಾರು?” ಎಂದು ಪ್ರಶ್ನಿಸಿದ್ದಾರೆ.

10 ರೂಪಾಯಿ ಲಂಚ ಕೇಳಿದರೂ ನನ್ನ ಗಮನಕ್ಕೆ ತನ್ನಿ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ನನಗೆ ಬಂದ ಚಾಟ್ ಮಾಹಿತಿಯನ್ನು ನೀಡಿ ತನಿಖೆ ಮಾಡಿ ಎಂದು ಕೇಳಿದ್ದೆ. ಆದರೆ, ನಾನು ಹೇಳಿದ ದಿನವೇ ಸಿಎಂ ಹಾಸನ ಜಿಲ್ಲಾಧಿಕಾರಿಗಳಿಗೆ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳೇ ಕ್ಲೀನ್‌ಚಿಟ್ ಕೊಟ್ಟ ಮೇಲೆ ನನ್ನಿಂದ ಇನ್ನೇನು ಮಾಹಿತಿ ಪಡೆಯುತ್ತಾರೆ* ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಚಾಟ್ ಮಾಡಿದ್ದ ನಂಬರ್ ಮತ್ತು ಅಲ್ಲಿ ಕೆಲಸ ಮಾಡಿದ ಡಿಸಿ ಪಿಎ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸಿದರೆ ಎಲ್ಲಾ ಸತ್ಯಾಸತ್ಯತೆ ಹೊರಬರುತ್ತದೆ. ಅಷ್ಟು ಪರಿಜ್ಞಾನ ಅಧಿಕಾರಿಗಳಿಗೆ ಬೇಡವೇ? ನನಗೆ ಯಾರೋ ಮುಸುಕುಧಾರಿ ಬಂದು ದಾಖಲೆ ಕೊಟ್ಟು ಹೋಗಿದ್ದರು. ಲಕ್ಷಾಂತರ ಜನ ಬಂದು ಹೋಗುತ್ತಾರೆ, ಅವರನ್ನು ಹಿಡಿದುಕೊಳ್ಳಲು ಆಗುತ್ತದೆಯೇ? ಈ ಬಗ್ಗೆ ತನಿಖೆ ಮಾಡಿ ಎಂದಿದ್ದಕ್ಕೆ ನನಗೇ ನೋಟಿಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು, ನವೆಂಬರ್ 26ರಂದು ಈ ಬಗ್ಗೆ ಸಭೆ ನಡೆಯಲಿದ್ದು, ಸಭೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಗ್ರೌಂಡ್ ರಿಪೋರ್ಟ್ ನೋಡಿಕೊಂಡು ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.


Spread the love

About Laxminews 24x7

Check Also

ಗ್ಯಾರಂಟಿ ಸಮಾವೇಶ ಮುಗಿಸಿ ಮರಳುತ್ತಿದ್ದ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – ಹಲವರಿಗೆ ಗಾಯ

Spread the loveಉಡುಪಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ವಾಪಸ್ ಮನೆಗೆ ಮರಳುತ್ತಿದ್ದ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ